ADVERTISEMENT
ಅಧಿಕಾರಕ್ಕೆ ಬಂದ ಕೇವಲ 26 ದಿನಗಳಲ್ಲೇ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕೋಮು ಗಲಾಟೆಯಲ್ಲಿ ಕೊಲೆಯಾದ ಮೂವರು ಮುಸಲ್ಮಾನರ ಕುಟುಂಬಗಳಿಗೆ ಮತ್ತು ಓರ್ವ ಹಿಂದೂ ಯುವಕನ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದೆ.
ಕಳೆದ ವರ್ಷದ ಜುಲೈ 19ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ಮಸೂದ್, ಜುಲೈ 28ರಂದು ಮಂಗಳಪೇಟೆಯ ಮೊಹಮ್ಮದ್ ಫಾಜಿಲ್, ಡಿಸೆಂಬರ್ 24ರಂದು ಕಾಟಿಪಳ್ಳದ ಅಬ್ದುಲ್ ಜಲೀಲ್ ಕೊಲೆಯಾಗಿದ್ದರು. ಇವರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಇದ್ದ ಅವಧಿಯಲ್ಲಿ 2018ರ ಜನವರಿ 3ರಂದು ಕಾಟಿಪಳ್ಳದಲ್ಲಿ ದೀಪಕ್ರಾವ್ ಕೊಲೆಯಾಗಿತ್ತು.
ಈ ನಾಲ್ಕು ಕುಟುಂಬಗಳಿಗೆ ಪೊಲೀಸ್ ಮಹಾನಿರ್ದೇಶಕರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸಿ ಜೂನ್ 14ರಂದು ಮುಖ್ಯಮಂತ್ರಿಗಳ ಕಚೇರಿ ಪರಿಹಾರ ಘೋಷಿಸಿ ಆದೇಶಿಸಿದೆ.
2018ರಲ್ಲೂ ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ:
2018ರಲ್ಲಿ ಕೊಲೆಯಾಗಿದ್ದ ದೀಪಕ್ರಾವ್ ಕುಟುಂಬಕ್ಕೆ ಆಗಲೂ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು.
ಹರ್ಷ ಕುಟುಂಬಕ್ಕೆ ಪರಿಹಾರ:
2022ರ ಮಾರ್ಚ್ನಲ್ಲಿ ಹತ್ಯೆಯಾಗಿದ್ದ ಶಿವಮೊಗ್ಗದ ಹರ್ಷ ಕುಟುಂಬಕ್ಕೆ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ 25 ಲಕ್ಷ ರೂಪಾಯಿ ನೀಡಿತ್ತು.
ಪ್ರವೀಣ್ ನೆಟ್ಟಾರು ಕುಟುಂಬಕ್ಕೂ ಪರಿಹಾರ:
ಕಳೆದ ವರ್ಷದ ಜುಲೈನಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಮೊತ್ತವನ್ನು ರಾಜ್ಯ ಸರ್ಕಾರದ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಿದ್ದರು.
ಸರ್ಕಾರದ ಹೊಣೆಗಾರಿಕೆ ಅಲ್ಲ:
ಕೋಮು ಗಲಾಟೆಯಲ್ಲಿ ಕೊಲೆಯಾದರೆ ಪರಿಹಾರ ನೀಡುವ ಚಾಳಿಯನ್ನು ರಾಜ್ಯ ಸರ್ಕಾರ ಬಿಡುವುದು ಉತ್ತಮ. ಕೊಲೆಯಾದವರ ಕುಟುಂಬದ ಜವಾಬ್ದಾರಿ ಸರ್ಕಾರದಲ್ಲ. ಈ ರೀತಿಯ ನಿರ್ಧಾರಗಳು ಆಡಳಿತ ವ್ಯವಸ್ಥೆಯಲ್ಲಿ ಕೆಟ್ಟ ಸಂಪ್ರದಾಯಕ್ಕೆ ಮತ್ತು ಅನಗತ್ಯ ಹೊರೆಗೂ ಕಾರಣವಾಗುತ್ತದೆ.
ಒಂದು ವೇಳೆ ಕೊಲೆಯಾದವರು ಪಕ್ಷದ ಕಾರ್ಯಕರ್ತರಾಗಿದ್ದರೆ ಅವರ ಜವಾಬ್ದಾರಿಯನ್ನು ಆಯಾಯ ಪಕ್ಷವೇ ನೋಡಿಕೊಳ್ಳಲಿ. ಅಧಿಕಾರಕ್ಕೇರಲು ಬೇಕಾಗುವ ಕಾರ್ಯಕರ್ತರ ಕುಟುಂಬದ ಹಿತಾಸಕ್ತಿಯನ್ನು ಪಕ್ಷಗಳು ಕಾಪಾಡಿಲ್ಲವೆಂದಾದರೆ ಅಂತಹ ಪಕ್ಷಕ್ಕೆ ಆ ಕಾರ್ಯಕರ್ತ ದುಡಿಯುವ ಅಗತ್ಯವೇನಿದೆ.
ಶಿವಮೊಗ್ಗದಲ್ಲಿ ಹತ್ಯೆಗೀಡಾದ ಯುವಕ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಿರುವುದರ ಹಿಂದೆ ಯಾವ ಅಜೆಂಡಾ ಅಡಗಿದೆ? ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ನೀಡಲಾಗಿದೆ? ರಾಜ್ಯದಲ್ಲಿ ವೈಯುಕ್ತಿಕ ದ್ವೇಷಗಳಿಗೆ ಮೃತಪಟ್ಟವರಿಗೆ ಇದೇ ರೀತಿ ಪರಿಹಾರ ನೀಡುತ್ತದೆಯೇ ಈ ಸರ್ಕಾರ?
ಎಂದು ಈಗ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ್ದರು.
ವಿರೋಧ ಪಕ್ಷದಲ್ಲಿ ಕೂತು ಪ್ರಶ್ನಿಸುವಾಗ ಇರುವ ಈ ಪ್ರಜ್ಞೆ ಮತ್ತು ಶಿಸ್ತನ್ನು ಅಧಿಕಾರಕ್ಕೆ ಬಂದ ಬಳಿಕ ಪ್ರದರ್ಶನ ಮಾಡ್ಬೇಕು.
ಮುಖ್ಯಮಂತ್ರಿ ಪರಿಹಾರ ನಿಧಿಯ ಉದ್ದೇಶ ಏನು..?
1978ರಲ್ಲಿ ಸ್ಥಾಪನೆಯಾದ ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲ ಬಳಕೆಯ ಉದ್ದೇಶ ಹೀಗಿದೆ.
-
ಕಡುಬಡತನದಲ್ಲಿ ಜೀವನ ಮಾಡುತ್ತಿರುವವರಿಗೆ
-
ಬಡ ಜನರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ
-
ನಿರುದ್ಯೋಗಿಗಳಿಗೆ
-
ದಿವ್ಯಾಂಗರಿಗೆ
-
ಕುಟುಂಬದ ದುಡಿಯುವ ವ್ಯಕ್ತಿಯು ಅಪಘಾತದಲ್ಲಿ ಆಕಾಲಿಕ ಮರಣ ಹೊಂದಿದಲ್ಲಿ ನಿರ್ಗತಿಕರಾಗುವ ಕುಟುಂಬದವರಿಗೆ.
-
ಆಕಸ್ಮಿಕ ದರ್ಘಟನೆಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳು, ಪ್ರದತ್ತವಾಗಿರುವ ವಿವೇಚನಾನುಸಾರ ಘೋಷಿಸುವ ಪರಿಹಾರದ ಮೊತ್ತವನ್ನು ನೊಂದ ಕುಟುಂಬದವರಿಗೆ ವಿತರಿಸಲಾಗುತ್ತಿದೆ
ಮುಖ್ಯಮಂತ್ರಿ ಪರಿಹಾರ ನಿಧಿಯ ಬಳಕೆಗೆ ಮುಖ್ಯಮಂತ್ರಿ ವಿವೇಚನಾಧಿಕಾರ ಇದೆಯಾದರೂ ಅದನ್ನು ಕೋಮು ಗಲಾಟೆಯಲ್ಲಿ ಕೊಲೆ ಆದವರ ಕುಟುಂಬಕ್ಕೆ ಕೊಡುವುದು ಥರವಲ್ಲ. ಆರ್ಥಿಕ ಶಿಸ್ತನ್ನು ಬಲ್ಲ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಂಥದ್ದೊಂದು ಶಿಸ್ತನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಬಳಕೆಯಲ್ಲೂ ಪಾಲನೆ ಮಾಡ್ಬೇಕು.
ಇಲ್ಲವಾದರೆ ಇದೇ ಮುಂದೊಂದು ದಿನ ರೂಢಿಯಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲ ಉದ್ದೇಶ ಮಾಯವಾದಿತು ಎಚ್ಚರಿಕೆ ಇರಲಿ.
ADVERTISEMENT