ಉಡುಪಿಯಲ್ಲಿ ಸೇತುವೆ, ರಸ್ತೆ ಕಾಮಗಾರಿ ವೇಳೆ ನಿಯಮ ಉಲ್ಲಂಘನೆ, ಮಂಗಳೂರಲ್ಲಿ ಹೋಟೆಲ್​ಗೂ ಕಾನೂನುಬಾಹಿರ ಅನುಮತಿ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಾಮಗಾರಿಗಳ ಜಾರಿಯ ವೇಳೆ ಕರಾವಳಿ ನಿಯಂತ್ರಣ ವಲಯದ ಉಲ್ಲಂಘನೆ ಮಾಡಲಾಗಿದೆ ಎಂದು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಹೇಳಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಶಾಂಭವಿ ನದಿಗೆ ಕಟ್ಟಲಾಗಿರುವ ಎರಡು ಸೇತುವೆಗಳು ಮತ್ತು ರಸ್ತೆ ನಿರ್ಮಾಣಕ್ಕೆ ಕರಾವಳಿ ನಿಯಂತ್ರಣ ವಲಯ ನಿಯಮಗಳಡಿ ಅನುಮತಿಯನ್ನು ಪಡೆದಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಅಪಾರ ಪ್ರಮಾಣದಲ್ಲಿ ಮರಗಳನ್ನು ನಾಶ ಮಾಡಲಾಗಿದೆ ಎಂದೂ ಹೇಳಿದೆ.

ಲೋಕೋಪಯೋಗಿ ಇಲಾಖೆಗೆ ಕಾರಣ ಕೇಳಿ ನೋಟಿಸ್​ ನೀಡಿದ್ದರೂ, ಕರ್ನಾಟಕ ರಾಜ್ಯ ಕರಾವಳಿ ವಲಯ ಪ್ರಾಧಿಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದೂ ವರದಿಯಲ್ಲಿ ಉಲ್ಲೇಖ ಆಗಿದೆ ಎಂದು ಇಂಗ್ಲೀಷ್​ ದೈನಿಕ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ.

ಮಂಗಳೂರಿನ ಗುರುಪುರದಲ್ಲಿ ನದಿಯ ಬಳಿ ಕಟ್ಟಲಾಗಿರುವ ಹೊಸ ಹೋಟೆಲ್​ಗೆ ಆ ಹೋಟೆಲ್​​ ಅಲೆಯೆತ್ತರ ಪ್ರದೇಶದಿಂದ 200 ಮೀಟರ್​ ದೂರದಾಚೆಗೆ ಇರಬೇಕು ಎಂಬ ನಿಯಮಗಳನ್ನು ಪಾಲನೆ ಮಾಡದೇ ಇದ್ದರೂ ಆ ಹೋಟೆಲ್​ಗೆ ಇಎಸಿ ಸಮಿತಿ ಅನುಮತಿ ನೀಡಿದೆ ಎಂಬ ಸ್ಫೋಟಕ ಅಂಶವನ್ನೂ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಲವು ಕಾಮಗಾರಿ ಮತ್ತು ಯೋಜನೆಗಳಿಗೆ ಅನುಮತಿ ನೀಡುವ ವೇಳೆ ಇಎಸಿ ತನ್ನ ಸಮಿತಿಯ ಮುಖ್ಯ ತಜ್ಞರು ಗೈರಾಗಿದ್ದರೂ ಅನುಮತಿ ನೀಡಿದೆ ಎಂಬ ಸಂಗತಿ ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ.

ಉಡುಪಿಯಲ್ಲಿ ಶೇಕಡಾ 25, ಕಾರವಾರದಲ್ಲಿ ಶೇಕಡಾ 14 ಮತ್ತು ಭಟ್ಕಳದಲ್ಲಿ ಶೇಕಡಾ 25ರಷ್ಟು ಮಾತ್ರ ಕೊಳಚೆ ನೀರನ್ನು ಸಂಸ್ಕರಿಸಿ ಸಮುದ್ರಕ್ಕೆ ಬಿಡಲಾಗುತ್ತಿದೆ ಎಂಬ ಅಂಶವೂ ಸಿಎಜಿ ವರದಿಯಲ್ಲಿ ಗೊತ್ತಾಗಿದೆ.

 

 

LEAVE A REPLY

Please enter your comment!
Please enter your name here