ರೈಲು ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿ – ಸಿಎಂ ಸಿದ್ದರಾಮಯ್ಯ ಸೂಚನೆ

ಒಡಿಶಾದಲ್ಲಿ ಸಂಭವಿಸಿರುವ ರೈಲು ದುರಂತದಿಂದ ರೈಲುಗಳು ರದ್ದಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಅಗತ್ಯ ಊಟ, ತಿಂಡಿ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಒಡಿಶಾದಲ್ಲಿ ಸಂಭವಿಸಿರುವ ರೈಲು ಅಪಘಾತ ದುರಂತದ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ, ಕೋಲ್ಕತ್ತಾ ಮುಂತಾದ ರಾಜ್ಯಗಳಿಗೆ ತೆರಳ ಬೇಕಿರುವ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಾಗಿದೆ.
ಹೀಗಾಗಿ ಇವರೆಲ್ಲರಿಗೂ ಅಗತ್ಯ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 2 ಸಾವಿರಕ್ಕೂ ಅಧಿಕ ಪ್ರಯಾಣಿಕರು ರೈಲುಗಳಿಲ್ಲದೇ ಪರದಾಡುವಂತಾಗಿದೆ.
ರೈಲು ದುರಂತ ಹಿನ್ನೆಲೆಯಲ್ಲಿ ಹಲವು ರೈಲುಗಳ ಓಡಾಟವನ್ನು ರದ್ದಗೊಳಿಸಲಾಗಿದ್ದು, ಹಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. 
ಬೈಯಪ್ಪನಹಳ್ಳಿಯಲ್ಲಿ ಉತ್ತರ ಭಾರತದ ಮೂಲದ ಕಾರ್ಮಿಕರು ಸಿಲುಕಿಕೊಂಡಿದ್ದರ ಬಗ್ಗೆ ಕಾರ್ಮಿಕ ಸಂಘಟನೆಗಳು ಧ್ವನಿ ಎತ್ತಿದ್ದವು.