ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಕೈಗೊಂಡಿದ್ದ 22.30 ಗಂಟೆಗಳ ಭೇಟಿಗಾಗಿ 53 ಕೋಟಿ ರೂಪಾಯಿ ಖರ್ಚು ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಈಗ ಪ್ರಧಾನಿ ಮೋದಿ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೂ ಕರ್ನಾಟಕದ ಖಜಾನೆಯಿಂದಲೇ ದುಡ್ಡು ಖರ್ಚು ಮಾಡುತ್ತಿದೆ.
ಖಾಸಗಿ ಪುಸ್ತಕ ಮುದ್ರಣ ಸಂಸ್ಥೆ ರೂಪಾ ಪಬ್ಲಿಕೇಷನ್ಸ್ ಇಂಡಿಯಾ `ಮೋದಿ @20 – ಕನಸುಗಳು ಈಡೇರಿದವು’ ಎಂಬ ಹೆಸರಿನ ಪುಸ್ತಕವನ್ನು ಪ್ರಕಟಿಸಿದೆ. ಇದು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರ 20 ವರ್ಷಗಳ ರಾಜಕೀಯ ಜೀವನದ ತಿಳಿಸಲಾಗಿದೆ.
ಈ ಪುಸ್ತಕದಲ್ಲಿ ಸುಧಾ ಮೂರ್ತಿ, ನಂದನ್ ನಿಲೇಕಣಿ, ಅರವಿಂದ್ ಪನಾಗರಿಯಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂತಾದವರು ಹೊಗಳಿ ಬರೆದ ಲೇಖನಗಳಿವೆ.
ಈ ಪುಸ್ತಕ ಇವತ್ತು ಕರ್ನಾಟಕದಲ್ಲೂ ಬಿಡುಗಡೆ ಆಗುತ್ತಿದೆ. ಆದರೆ ಸ್ವತಃ ರಾಜ್ಯ ಸರ್ಕಾರವೇ ದುಡ್ಡು ಖರ್ಚು ಮಾಡಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದೆ.
ಮೋದಿ ಪುಸ್ತಕದ ಬಗ್ಗೆ ಬೊಮ್ಮಾಯಿ ಸರ್ಕಾರದಿಂದ ಜಾಹೀರಾತು:
ಮೋದಿ ಪುಸ್ತಕದ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಬೊಮ್ಮಾಯಿ ಸರ್ಕಾರ ಕರ್ನಾಟಕದಲ್ಲಿನ ಎಲ್ಲ ಪ್ರಮುಖ ಕನ್ನಡ ಮತ್ತು ಇಂಗ್ಲೀಷ್ ದಿನಪತ್ರಿಗಳ ಮುಖಪುಟ ಮತ್ತು ಒಳಪುಟದಲ್ಲಿ ಜಾಹೀರಾತು ನೀಡಿದೆ.
ಇವತ್ತು ಸಂಜೆ 4.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕೇಂದ್ರ ಪ್ರಸಾರ ಖಾತೆ ಸಚಿವ ಲೋಗನಾಥನ್ ಮುರುಗನ್ ಭಾಗವಹಿಸಲಿದ್ದಾರೆ.
ಸಿದ್ದರಾಮಯ್ಯಗೂ ಆಹ್ವಾನ:
ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಾಗಿದೆ. ಬೆಂಗಳೂರಿನ ಎಲ್ಲ ಸಚಿವರೂ, ಶಾಸಕರೂ, ರಾಜ್ಯದ ಎಲ್ಲ ಸಂಸದರು ಮತ್ತು ಶಾಸಕರಿಗೂ ಆಹ್ವಾನ ನೀಡಲಾಗಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಕರ್ನಾಟಕ ವಾರ್ತಾ ಇಲಾಖೆ ಜಾಹೀರಾತು ನೀಡಿದ್ದು, ಕಾರ್ಯಕ್ರಮವನ್ನು ಸರ್ಕಾರವೇ ಆಯೋಜಿಸುತ್ತಿದೆ.
ಅಸ್ಸಾಂನಲ್ಲೂ ಪ್ರಧಾನಿ ಮೋದಿ ಕುರಿತ ಈ ಪುಸ್ತಕವನ್ನು ಅಲ್ಲಿನ ಸಿಎಂ ಹೇಮಂತ್ ಬಿಸ್ವಾಸ್ ಶರ್ಮಾ ಬಿಡುಗಡೆ ಮಾಡಿದ್ದರು.