ADVERTISEMENT
ಉತ್ತರ ಕನ್ನಡ ಜಿಲ್ಲೆಯಲ್ಲಿ (Uttarkannada) ಉತ್ತಮ ದರ್ಜೆಯ ಆಸ್ಪತ್ರೆಗೆ (Super Specialty) ಮಂಜೂರು ಮಾಡುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavraj Bommai) ಅವರೇ ಸಚಿವರಾಗಿರುವ ಹಣಕಾಸು ಇಲಾಖೆ (Financial Department) ಅನುಮೋದನೆ ನೀಡಿಲ್ಲ.
ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆರ್ಥಿಕ ಇಲಾಖೆ ಮುಂದೆ ಇಟ್ಟಿದ್ದ ಪ್ರಸ್ತಾಪವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ವಿಧಾನಸಭೆಯಲ್ಲಿ ಲಿಖಿತ ರೂಪದ ಉತ್ತರ ನೀಡಿದ್ದಾರೆ.
ಕಾರವಾರದಲ್ಲಿ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವ ಬಗ್ಗೆ ಈ ಹಿಂದೆ ಸ್ವೀಕರಿಸಲಾದ ಪ್ರಸ್ತಾಪನೆಗೆ ಸಂಬಂಧಿಸಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯಕ್ಕಾಗಿ ಅಗತ್ಯವಿರುವ ಜಾಗ, ಸಿಬ್ಬಂದಿ, ಉಪಕರಣ ಮತ್ತು ಇತ್ಯಾದಿ ಮೂಲ ಸೌಲಭ್ಯಗಳು ಹಾಗೂ ಅದಕ್ಕೆ ತಗಲುವ ಆರ್ಥಿಕ ಹೊರೆಯ ವಿವರಗಳನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಂದ ಪಡೆದು ಸದರಿ ಪ್ರಸ್ತಾಪನೆಯ ಮಂಜೂರಾತಿಗಾಗಿ ಕೋರಲಾಗಿತ್ತು. ಆದರೆ ಆರ್ಥಿಕ ಇಲಾಖೆಯು ಆ ಪ್ರಸ್ತಾಪವನೆಗೆ ಒಪ್ಪಿಗೆ ನೀಡಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಡತವನ್ನು ಆರ್ಥಿಕ ಇಲಾಖೆಯ ಸಹಮತಿಗಾಗಿ ಕಳುಹಿಸಲು ಕ್ರಮವಹಿಸಲಾಗುತ್ತದೆ. ಈ ಪ್ರಸ್ತಾಪನೆಗೆ ಆರ್ಥಿಕ ಇಲಾಖೆಯಿಂದ ಸಹಮತಿ ಬಂದ ನಂತರದಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಲು ಕ್ರಮಕೈಗೊಳ್ಳಲಾಗುವುದು
ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ( Dr K Sudhakar) ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.
ಇತ್ತೀಚೆಗಷ್ಟೇ ಉತ್ತರಕನ್ನಡದಿಂದ ರೋಗಿಯನ್ನು ಮಣಿಪಾಲದ (Manipal) ಆಸ್ಪತ್ರೆಗೆ ಕರೆತರುವ ವೇಳೆ ಟೋಲ್ನಲ್ಲಿ (Toll) ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಅಪಘಾತಕ್ಕೀಡಾದ ಬಳಿಕ ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗು ಬಲವಾಗಿತ್ತು.
ADVERTISEMENT