ಪಿಎಸ್ಐ ನೇಮಕಾತಿ ಅಕ್ರಮ ಬಯಲಿಗೆಳೆದ ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೊಟೀಸ್ ಜಾರಿ ಮಾಡಿದೆ. ಆದರೆ, ತಮ್ಮದೇ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್, ಹೆಚ್.ವಿಶ್ವನಾಥ್ ಹಾಗೂ ಸ್ವತಃ ಗೃಹ ಸಚಿವರ ವಿರುದ್ಧ ಯಾಕೆ ನೋಟಿಸ್ ಜಾರಿ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ತಂಭಗಳು. ನಾವು ವಿರೋಧ ಪಕ್ಷದಲ್ಲಿದ್ದು, ರಾಜ್ಯದುದ್ದಗಲಕ್ಕೂ ಅನೇಕ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮಗೂ ಬೇರೆ ಬೇರೆ ಮೂಲಗಳಿಂದ ಭ್ರಷ್ಟಾಚಾರ, ಅಕ್ರಮ, ಅನ್ಯಾಯಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತವೆ.
ಕಲಬುರ್ಗಿಗೆ ಸಂಬಂಧಿಸಿದ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಕೇವಲ ಶಾಸಕರಲ್ಲ. ಪಕ್ಷದ ವಕ್ತಾರರೂ ಹೌದು. ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ನಮ್ಮ ದಲಿತ ನಾಯಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಇದು ನಮಗಾಗುತ್ತಿರುವ ಅನ್ಯಾಯ ಎಂದು ಅನೇಕ ದಲಿತ ಮುಖಂಡರು ರಾಜ್ಯಾದ್ಯಂತ ಧರಣಿ ಮಾಡುವುದಾಗಿ ನನ್ನ ಮನೆಗೇ ಬಂದು ಹೇಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ನೋಟಿಸ್ ಜಾರಿಯಾದ ತಕ್ಷಣವೇ ನಮಗೆ ಮಾಹಿತಿ ನೀಡಿದ್ದು, ನಾನು, ಶಾಸಕಾಂಗ ಪಕ್ಷದ ನಾಯಕರು, ರಾಷ್ಟ್ರೀಯ ನಾಯಕರು ಚರ್ಚಿಸಿ ಈ ನೋಟೀಸ್ ಗೆ ಅಂಜುವ ಅಗತ್ಯವಿಲ್ಲ ಎಂದು ಹೇಳಿದ್ದೇವೆ. ಅವರು ಬರಲಿ, ನಾವು ಎಲ್ಲವನ್ನು ಎದುರಿಸುತ್ತೇವೆ.
ಸಚಿವರ ಜತೆ ಫೋಟೋ ತೆಗೆಸಿಕೊಂಡು, ಈ ಅಕ್ರಮದ ಪ್ರಮುಖ ಆರೋಪಿಗಳನ್ನು ತನಿಖಾಧಿಕಾರಿಗಳು ಮೊದಲು ತನಿಖೆ ಮಾಡಲಿ. ಇವರು ಕಳ್ಳರನ್ನು ಹಿಡಿಯಬೇಕೇ ಹೊರತು, ಅಕ್ರಮ ಬಯಲಿಗೆಳೆದವರಿಗೆ ನೋಟೀಸ್ ನೀಡುವುದಲ್ಲ. ಇವರಿಗೆ ನಾವು ಯಾವ ಸಹಕಾರ ನೀಡಬೇಕು? ತಪ್ಪು ಮಾಡಿದವರನ್ನು ಹಿಡಿಯುವುದು ನಿಮ್ಮ ಜವಾಬ್ದಾರಿ. ಅಕ್ರಮ ಬಯಲು ಮಾಡಿದ ನಾಯಕರಿಗೆ ನೋಟೀಸ್ ಜಾರಿ ಮಾಡಿ ಮುಂದೆ ಯಾರೂ ನಿಮ್ಮ ವಿರುದ್ಧ ಧ್ವನಿ ಎತ್ತದಂತೆ ಮಾಡಲು ಪ್ರಯತ್ನಿಸುತ್ತಿದ್ದೀರಾ? ಹೆದರಿಸುತ್ತಿದ್ದೀರಾ? ಪ್ರಾಣ ಹೋದರೂ ಸರಿಯೇ, ನಮ್ಮ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ.
ಪಿಎಸ್ಐ ನೇಮಕ ಅಕ್ರಮದಲ್ಲಿ ಬಿಜೆಪಿಯವರೇ ಪ್ರಮುಖ ಆರೋಪಿಯಾಗಿದ್ದು, ನಮಗೆ ಅವರು ಯಾರು ಎಂದು ಗೊತ್ತೇ ಇಲ್ಲ ಎಂದು ಸಚಿವರು ಹೇಳಿದ್ದರು. ಆದರೆ ಮರುದಿನವೇ ಆರೋಪಿ ಜತೆ ಅವರು ಇರುವ, ಆರೋಪಿ ಮನೆಗೆ ಭೇಟಿ ಕೊಟ್ಟಿರುವ ಫೋಟೋಗಳು ಪ್ರಚಾರವಾಗಿವೆ. ಗೃಹ ಸಚಿವರು, ಬಿಜೆಪಿ ನಾಯಕರ ಜತೆಗೆ ಈ ಆರೋಪಿ ಇರುವ ಫೋಟೋಗಳಿವೆ. ಇವೆಲ್ಲವೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಯತ್ನಾಳ್ ಅವರು ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ್ದಾರೆ. ಅವರಿಗೆ ಯಾಕೆ ನೊಟೀಸ್ ಜಾರಿ ಮಾಡಲಿಲ್ಲ? ರಾಜ್ಯದಲ್ಲಿ ಏನಾಗುತ್ತಿದೆ? ಮುಖ್ಯಮಂತ್ರಿಗಳಿಗೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದೆಯೋ, ಇಲ್ಲವೋ? ಈ ಪ್ರಕರಣದಲ್ಲಿ ಆರೋಪಿಯಾಗಿರುವರಿಂದ ಸನ್ಮಾನ ಮಾಡಿಸಿಕೊಂಡಿದ್ದೀರಲ್ಲಾ ನಿಮಗೂ ಅವರಿಗೂ ಹೇಗೆ ಸಂಪರ್ಕ ಎಂದು ತನಿಖಾಧಿಕಾರಿಗಳು ಗೃಹ ಸಚಿವರಿಗೆ ನೊಟೀಸ್ ಜಾರಿ ಮಾಡಬೇಕಿತ್ತು. ಯಾಕೆ ಮಾಡಿಲ್ಲ?’ ಎಂದು ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.