ರಾಷ್ಟ್ರೀಯ ಸ್ವಯಂ ಸೇವಕದ ಸಂಘ(ಆರ್ಎಸ್ಎಸ್)ನ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದಲ್ಲಿ 20 ಕ್ಕೂ ಹೆಚ್ಚೂ ಮಠಾಧೀಶರೊಂದಿಗೆ ಚರ್ಚೆ ನಡೆಸಿದ್ದಾರೆ. ಆಹ್ವಾನಿತ, ಗುರುತಿನ ಚೀಟಿ ಹೊಂದಿದ್ದ ಮಠಾಧೀಶರಿಗೆ ಮಾತ್ರ ಗುರುಪೀಠದ ಒಳಗೆ ಬಿಡಲಾಯಿತು.
ಸೋಮವಾರ ರಾತ್ರಿ ಚಿತ್ರದುರ್ಗ ನಗರಕ್ಕೆ ಆಗಮಿಸಿದ್ದ ಮೋಹನ್ ಭಾಗವತ್ ಅವರು ಮಾದಾರಾ ಚೆನ್ನಯ್ಯ ಗುರುಪೀಠಧಲ್ಲಿ ವಾಸ್ತವ್ಯ ಮಾಡಿದ್ದರು. ಇಂದು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ದಲಿತ, ಹಿಂದುಳಿದ ವರ್ಗಗಳ ಮಠಾಧೀಶರನ್ನು ಭೇಟಿ ಮಾಡಿದ ಅವರು ಹಲವು ವಿಷಯಗಳ ಬಗ್ಗೆ ಸಂವಾದ ನಡೆಸಿದ್ದಾರೆ.
ಬೋವಿ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಭಗೀರಥ ಮಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಹಡಪದ ಶ್ರೀ ಅಪ್ಪಣ್ಣ ಸ್ವಾಮೀಜಿ, ಈಡಿಗ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀಕೃಷ್ಣ ಯಾದವ ಮಠದ ಶ್ರೀ ಯಾದವಾನಂದ ಸ್ವಾಮೀಜಿ, ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಚಲವಾದಿ ಮಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ಶ್ರೀ ಹರಳಯ್ಯ ಸ್ವಾಮೀಜಿ, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಠಾಧೀಶರು ಸಂವಾದದಲ್ಲಿ ಭಾಗಿಯಾಗಿದ್ದರು.