ಶಿವಮೊಗ್ಗದ ರಂಗಾಯಣದಲ್ಲಿ ಈ ಬಾರಿ ಮಕ್ಕಳ ಬೇಸಿಗೆ ಸಾಂಸ್ಕೃತಿಕ ಶಿಬಿರದ ಸಮಾರೋಪ ಸಮಾರಂಭವನ್ನು ಇದೇ ಮೇ 2 ಮತ್ತು 3 ನೇ ದಿನಾಂಕದಂದು ಆಯೋಜಿಸಲಾಗಿದೆ.
ರಂಗಾಯಣದಲ್ಲಿ ಚಿಣ್ಣರ ಬೇಸಿಗೆ ಸಾಂಸ್ಕೃತಿಕ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಇದೀಗ ಈ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಮಕ್ಕಳು ನಾಟಕಗಳನ್ನು ಪ್ರದರ್ಶಿಸಲಿದ್ದಾರೆ ಎಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳ್ಳಿ ಹಾಗೂ ಶಿಬಿರದ ನಿರ್ದೇಶಕ ಪ್ರವೀಣ್ ಬೆಳ್ಳಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಮೊದಲನೇ ದಿನ ಮೇ 2 ರಂದು ಸಾಯಂಕಾಲ 6 ಗಂಟೆಗೆ ಸಮಾರಂಭ ಆರಂಭವಾಗಲಿದೆ. ಅನಂತರ ಬಿ.ವಿ.ಕಾರಂತ್ ರಚನೆಯ ಹೆಡ್ಡಾಯಣ ಹಾಗೂ ಗಜಾನನ ಶರ್ಮಾ ರಚನೆಯ ಹಂಚಿನ ಮನೆ ಪರಸಪ್ಪ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಮೇ 3 ರಂದು ಸಾಯಂಕಾಲ 6 ಗಂಟೆಗೆ ಲೀಲಾ ಗರಡಿ ರಚನೆಯ ಉಷ್ಣೀಶ, ಕುವೆಂಪು ರಚನೆಯ ನಂದ ಗೋಪಾಲ ಹಾಗೂ ಬಿಳಿಗೆರೆ ಕೃಷ್ಣ ಮೂರ್ತಿ ರಚನೆಯ ಅಗಲ ಕಿವಿಯ ಅರಿವುಗಾರ ನಾಟಕಗಳು ಪ್ರದರ್ಶನಗೊಳ್ಳಲಿವೆ.