ಛತ್ತೀಸ್ಗಢದಲ್ಲಿನ ಕಾಂಗ್ರೆಸ್ ಸರ್ಕಾರ ಇದೇ ಜುಲೈ 28 ರಿಂದ ನಡೆಯಲಿರುವ ಸ್ಥಳೀಯ ‘ಹರೇಲಿ’ ಹಬ್ಬದಿಂದ ಪ್ರತಿ ಲೀಟರ್ಗೆ 4 ರೂ.ಗಳಂತೆ ಗೋಮೂತ್ರ ಖರೀದಿಸಲು ನಿರ್ಧರಿಸಿದೆ.
ಗೋ ಪಾಲಕರು, ಸಾವಯವ ಕೃಷಿಕರಿಗೆ ಆದಾಯವನ್ನು ಒದಗಿಸುವ ಮತ್ತು ಗ್ರಾಮೀಣ ಆರ್ಥಕತೆಯನ್ನು ಬಲಪಡಿಸುವ ಉದ್ದೇಶದಿಂದ ಹಸುವಿನ ಸಗಣಿ ಸಂಗ್ರಹಿಸುವ ಗೋಧನ್ ನ್ಯಾಯ್ ಎಂಬ ಯೋಜನೆಯನ್ನು ಚತ್ತೀಸ್ಗಢ ಸರ್ಕಾರ 2 ವರ್ಷಗಳ ಹಿಂದೆ ಜಾರಿಗೆ ತಂದಿತ್ತು.
ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿ ಎರಡು ಸ್ವತಂತ್ರ ಗೌಥನ್ಸ್ (ಜಾನುವಾರು ಆಶ್ರಯ) ರನ್ನು ಗೋ ಮೂತ್ರ ಸಂಗ್ರಹಣೆಗೆ ನೇಮಕ ಮಾಡಲಾಗುವುದು. ಗೌಥನ್ ನಿರ್ವಹಣಾ ಮಂಡಳಿ ಸ್ಥಳೀಯವಾಗಿ ಗೋ ಮೂತ್ರದ ಬೆಲೆ ನಿರ್ಧರಿಸಲಿದ್ದಾರೆ. ಆದಾಗ್ಯೂ, ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆ 1 ಲೀ. ಗೋಮೂತ್ರಕ್ಕೆ ಕನಿಷ್ಠ 4 ರೂ. ದರ ನೀಡಲು ನಿರ್ಧರಿಸಿದೆ.
ಕೃಷಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಹರೇಲಿ ಹಬ್ಬ ಬರುವ ಮುಂಚೆಯೇ ಎಲ್ಲಾ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಎರಡು ಸ್ವತಂತ್ರ ಗೌಥನ್ಸ್ ( ಜಾನುವಾರು ಆಶ್ರಯ) ರನ್ನು ಗುರುತಿಸುವುದು ಮತ್ತು ಇದರ ಕಾರ್ಯನಿರ್ಹವಣೆಗೆ ಸ್ವಸಹಾಯ ಗುಂಪುಗಳ ಸದಸ್ಯರಿಗೆ ತರಬೇತಿ ನೀಡುವುದು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ. ಸಂಗ್ರಹಿಸಿದ ಗೋಮೂತ್ರವನ್ನು ಕೀಟ ನಿಯಂತ್ರಣ ಉತ್ಪನ್ನಗಳು ಮತ್ತು ನೈಸರ್ಗಿಕ ದ್ರವ ಗೊಬ್ಬರ ತಯಾರಿಸಲು ಬಳಸಲಾಗುತ್ತದೆ ಎಂದು ಅಧಿಕೃತ ಅಧಿಕಾರಿ ಹೇಳಿದ್ದಾರೆ.
2020 ರ ಜುಲೈ ನಲ್ಲಿ ಹರೇಲಿ ಹಬ್ಬದಲ್ಲಿ ಗೋಧನ್ ನ್ಯಾಯ್ ಯೋಜನೆಯನ್ನು ಚತ್ತೀಸ್ಗಢ ಸರ್ಕಾರ ಜಾರಿಗೆ ತಂದಿತ್ತು. ಈ ಯೋಜನೆಯಡಿಯಲ್ಲಿ 2 ಕೆಜಿ ಸಗಣಿಗೆ 2 ರೂ.ನಂತೆ ಖರೀದಿಸಲಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರಕಾರವು 150 ಕೋಟಿ ರೂ.ಗೂ ಅಧಿಕ ಮೌಲ್ಯದ ಹಸುವಿನ ಸಗಣಿ ಸಂಗ್ರಹಿಸಿದ್ದು, ಸ್ವಸಹಾಯ ಸಂಘಗಳು 20 ಲಕ್ಷ ಕ್ವಿಂಟಲ್ ವರ್ಮಿಕಾಂಪೋಸ್ಟ್, ಸೂಪರ್ ಕಾಂಪೋಸ್ಟ್ ಮತ್ತು ಸೂಪರ್ ಪ್ಲಸ್ ಕಾಂಪೋಸ್ಟ್ ಉತ್ಪಾದಿಸಿವೆ. ಸ್ವ ಸಹಾಯ ಗುಂಪುಗಳು ಈ ಕಾರ್ಯಕ್ಕಾಗಿ 143 ಕೋಟಿ ರೂ.ಗಳನ್ನು ಸರ್ಕಾರದಿಂದ ಪಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.