ನಮೀಬಿಯಾದಿಂದ ಭಾರತಕ್ಕೆ ತಂದ ಚಿರತೆಗಳ ಮೊದಲ ಬೇಟೆ , ಇತ್ತ ಆಶಾ ಚಿರತೆ ಗರ್ಭಿಣಿ..!

ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಜನ್ಮದಿನದಂದು ನಮಿಬೀಯಾದಿಂದ (Namibia) ಕರೆತರಲಾದ ಎಂಟು ಚಿರತೆಗಳ (Cheetah) ಪೈಕಿ ಎರಡು ಚಿರತೆಗಳು ತಮ್ಮ ಮೊದಲ ಬೇಟೆಯನ್ನಾಡಿವೆ.
ಸೆಪ್ಟೆಂಬರ್​ 17ರಂದು ನಮೀಬಿಯಾದಿಂದ ತಂದ 8 ಚಿರತೆಗಳನ್ನು ಮಧ್ಯಪ್ರದೇಶ ರಾಜ್ಯದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಕ್ವಾರಂಟೈನ್​ನಲ್ಲಿ ಇಡಲಾಗಿತ್ತು.
ಕ್ವಾರಂಟೈನ್​ ಅವಧಿ ಮುಗಿದ ಬಳಿಕ 8 ಚಿರತೆಗಳ ಪೈಕಿ ಗಂಡು ಚಿರತೆಗಳಾದ ಫ್ರೆಡ್ಡಿ ಮತ್ತು ಎಲ್ಟಾನ್​ನ್ನು ಭಾನುವಾರ ಬಿಡುಗಡೆ ಮಾಡಲಾಗಿತ್ತು. ಕ್ವಾರಂಟೈನ್​ನಿಂದ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಜಿಂಕೆಯನ್ನು ಬೇಟೆಯಾಡಿವೆ. ಭಾನುವಾರ ಸಂಜೆ 6 ಗಂಟೆ ಮತ್ತು ಸೋಮವಾರ ಮುಂಜಾನೆ ನಡುವೆ ಬೇಟೆಯಾಡಿವೆ.
ಕ್ವಾರಂಟೈನ್​ನಿಂದ ಬಿಡುಗಡೆ ಆದ ಗಂಟೆಯೊಳಗೆ ಸಾರಂಗವನ್ನು ಬೇಟೆಯಾಡುವ ಯತ್ನ ವಿಫಲವಾಯಿತ್ತಾದರೂ ಆ ಬಳಿಕ ಜಿಂಕೆಯೊಂದನ್ನು ಬೇಟೆಯಾಡಿವೆ. ರಾಷ್ಟ್ರೀಯ ಉದ್ಯಾನ ಅಧಿಕಾರಿಗಳ ಸುತ್ತಾಟ ವೇಳೆ ಗಂಡು ಜಿಂಕೆಯ ಮೃತದೇಹ ಸಿಕ್ಕಿದೆ.
ಏನಿದು ಚಿರತೆಗಳಿಗೂ ಕ್ವಾರಂಟೈನ್​..?
8 ಸಾವಿರ ಕಿಲೋ ಮೀಟರ್​ ದೂರದಲ್ಲಿ ನಮಿಬಿಯಾದಿಂದ ಕರತರೆಲಾದ ಚಿರತೆಗಳು ಭಾರತದ ಕುನೋ ರಾಷ್ಟ್ರೀಯ ಉದ್ಯಾನ ಅಪರಿಚಿತ ಸ್ಥಳ. ಇದೇ ಮೊದಲ ಬಾರಿಗೆ ಅನ್ಯ ಪ್ರಬೇಧದ ಜೀವಿಯನ್ನು ಒಂದು ಭೂ ಖಂಡದಿಂದ ಇನ್ನೊಂದು ಭೂ ಖಂಡಕ್ಕೆ ಸ್ಥಳಾಂತರಿಸಲಾಗಿದೆ.
ಕ್ವಾರಂಟೈನ್​ ಅವಧಿಯಲ್ಲಿ ಈ ಚಿರತೆಗಳಿಗೆ ಎಮ್ಮೆ ಮಾಂಸವನ್ನು ನೀಡಲಾಗುತ್ತಿತ್ತು. ಅವುಗಳನ್ನು ಕ್ವಾರಂಟೈನ್​ನಿಂದ ಮುಕ್ತಗೊಳಿಸಿದ ಗಂಟೆಯಲ್ಲೇ ಬೇಟೆಯಾಡಿವೆ ಎಂದರೆ ಅವು ಗಟ್ಟಿಮುಟ್ಟಾಗಿವೆ ಮತ್ತು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಳ್ಳುತ್ತಿವೆ ಎಂದರ್ಥ.
ಅನ್ಯ ಪ್ರಾಣಿಗಳಿಂದ ಚಿರತೆಗಳಿಗೆ ರೋಗಗಳು ಹರಡದಂತೆ ಇರಲಿ ಎಂದು ನಮಿಬಿಯಾದಿಂದ ತಂದ ಆರಂಭದಲ್ಲಿ ಇವುಗಳನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. 8 ಚಿರತೆಗಳನ್ನು ಹಂತಹಂತವಾಗಿ ಕ್ವಾರಂಟೈನ್​ನಿಂದ ಮುಕ್ತಗೊಳಿಸಲಾಗುತ್ತದೆ. ಮುಂದಿನ ವಾರ ಗಂಡು ಚಿರತೆ ಒಬಾನ್​ ಬಿಡುಗಡೆ ಆಗಲಿದ್ದಾನೆ.
ಚಿರತೆಗಳ ಬೇಟೆಗಾಗಿಯೇ 4 ಸಾವಿರ ಜಿಂಕೆಗಳನ್ನು ಬಿಡಲಾಗಿದೆ.
ಎಂಟು ಚಿರತೆಗಳಲ್ಲಿ ಮೂರು ಗಂಡು ಚಿರತೆಗಳು ಮತ್ತು ಐದು ಹೆಣ್ಣು ಚಿರತೆಗಳು. ಕ್ವಾರಂಟೈನ್​ ಅವಧಿಯಲ್ಲಿ ಫ್ರೆಡ್ಡಿ ಮತ್ತು ಎಲ್ಟಾನ್​ ಸಹೋದರರು ಜೊತೆಯಾಗಿದ್ದರು. ಸವನ್ನಾ ಮತ್ತು ಸಾಶಾ ಹೆಣ್ಣು ಸಹೋದರಿ ಚಿರತೆಗಳು ಕೂಡಾ ಜೊತೆಗಿವೆ. ಆಶಾ ಎಂಬ ಹೆಸರಿನ ಚಿರತೆ ಗರ್ಭಿಣಿ ಆಗಿರಬಹುದು ಎಂದು ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳ ಅನಿಸಿಕೆ. ಪ್ರಧಾನಿ ನರೇಂದ್ರ ಮೋದಿಯವರು ಈ ಚಿರತೆಗೆ ಆಶಾ ಎಂದು ನಾಮಕರಣ ಮಾಡಿದ್ದರು.
ಮೂರು ಗಂಡು ಚಿರತೆಗಳ ವಯಸ್ಸು 4.5ರಿಂದ 5.5 ವರ್ಷವಾಗಿದ್ದರೆ, ಐದು ಹೆಣ್ಣು ಚಿರತೆಗಳ ವಯಸ್ಸು 2ರಿಂದ ಐದು ವರ್ಷ.
ಅಂತಿಮವಾಗಿ ಇವುಗಳನ್ನು 748 ಚದರ ಕಿಲೋ ಮೀಟರ್​ ವಿಸ್ತೀರ್ಣದ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುತ್ತದೆ. ಬೇಟೆಯಾಡುವ ಅನ್ಯ ಪ್ರಾಣಿಗಳು ಬರದಂತೆ ತಡೆಯಲು 11.7 ಕಿಲೋ ಮೀಟರ್​ ಎಲೆಕ್ಟ್ರಿಕ್​ ಚಾರ್ಜ್​ ಬ್ಯಾಟರಿ ಬೇಲಿಯನ್ನು ಅಳವಡಿಸಲಾಗಿದೆ.