ನುಡಿನಮನ: ಡಾ.ಅಜಿತ ಮುರುಗುಂಡೆ. ಬೆಂಗಳೂರು
ಇಂದು ಬೆಳಗಿನ ಜಾವ ಮೂಲ ಸಂಘ ದೇಶಿ ಗಣ ಆಚಾರ್ಯ ಕುಂದಕುಂದರ ಹಾಗೂ ಪ್ರಾಂತ ಸ್ಮರಣೀಯರಾದ ಶ್ರೀ ನೇಮಿ ಸಾಗರವರ್ಣೀ ಭಟ್ಟಾರಕ ಪರಂಪರೆಯ ವರ್ತಮಾನ ಪೀಠಾಧೀಶರಾದ ಪ.ಪೂ. ಸ್ವಸ್ತಿಶ್ರೀ ಜಗದ್ಗುರು ಆಧ್ಯಾತ್ಮ ಯೋಗಿ, ಕರ್ಮಯೋಗಿ, ಭಟ್ಟಾರಕ ಶಿರೋಮಣಿ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿದರು.
ಭಗವಾನ 1008 ಶ್ರೀ ಮಹಾವೀರ ಜಯಂತಿ ಚೈತ್ರ ಶುದ್ಧ ತ್ರಯೋದಶಿ. ಈ ದಿವಸವೇ ಶ್ರವಣಬೆಳಗೊಳದ ಶ್ರೀಮಠದಲ್ಲಿ ಜೈನ ಪರಂಪರೆಯ ಆಗಮೋಕ್ತ ರೀತಿಯಲ್ಲಿ ಪೂಜ್ಯ ಶ್ರೀಗಳ ಪಟ್ಟಾಭಿಷೇಕ 1970ರಲ್ಲಿ ನಡೆದಿತ್ತು.
ಪೂಜ್ಯ ಶ್ರೀಗಳ ಸಂಕ್ಷಿಪ್ತ ಪರಿಚಯ:
ಪೂಜ್ಯ ಶ್ರೀಗಳು ದಿನಾಂಕ: 03-05-1949ರಲ್ಲಿ ವರಾಂಗದಲ್ಲಿ ಜನಿಸಿದರು. ಪೂವಾ೯ಶ್ರಮದ ಹೆಸರು ರತ್ನಾಕರ.ತಂದೆಯ ಹೆಸರು:ಶ್ರೀ ಕೀರ್ತಿಶೇಷ ಚಂದ್ರರಾಜ. ತಾಯಿಯ ಹೆಸರು: ಮಾತೃಶ್ರೀ ಕಾಂತಮ್ಮನವರು.ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಪ್ರಾರಂಭಿಸಿ ಹೊಂಬುಜ ಹಾಗೂ ವಿವಿಧ ಜೈನ ಮಠಗಳಲ್ಲಿ ಕನ್ನಡ, ಸಂಸ್ಕೃತ, ಪ್ರಾಕೃತ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದರು.ಸತತ ಜೈನ ಧರ್ಮದ ತತ್ವಶಾಸ್ತ್ರ ಅಧ್ಯಯನ ಕೈಗೊಂಡರು.ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಇತಿಹಾಸ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ.ತತ್ವಶಾಸ್ತ್ರಗಳ ಸ್ನಾತಕೋತ್ತರ ಪದವಿಗಳನ್ನು ಪಡೆದರು.
ಪೂಜ್ಯ ಶ್ರೀಗಳು ದಿನಾಂಕ: 12-12-1969ರಲ್ಲಿ ಕ್ಷುಲ್ಲಕ ದೀಕ್ಷೆ ಸ್ವೀಕರಿಸಿದರು.
1970ರಲ್ಲಿ ಶ್ರವಣಬೆಳಗೊಳದ ಮಠದ ಮಠಾಧೀಶರಾದರು. ಬಳಿಕ ಎಸ್.ಡಿ. ಜೆ.ಎಂ.ಐ ಟ್ರಸ್ಟ್ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಪ್ರಾಥಮಿಕ ಶಿಕ್ಷಣದಿಂದ ಇಂಜಿನಿಯರಿಂಗ್ ಕಾಲೇಜು ಶಿಕ್ಷಣದವರೆಗೆ ಅದನ್ನು ಕೊಂಡೊಯ್ಯದ ಕೀರ್ತಿ ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ.
ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಪ್ರಾಕೃತ ಭಾಷೆಗೆ ಮರುಜೀವ ತುಂಬಿದರು.
ಪ್ರಾಕೃತ ವಿದ್ವಾಂಸರಿಗೆ- ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ, ಜೈನ ಸಾಹಿತ್ಯ ಸಂಸ್ಕೃತಿಗಳಿಗೆ- ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ,ಕನ್ನಡ ಜೈನ ಸಾಹಿತ್ಯ ಸೇವೆಗೆ- ಚಾವುಂಡರಾಯ ಪ್ರಶಸ್ತಿಗಳನ್ನು ಸ್ಥಾಪಿಸಿ,ವಿಶೇಷ ಸಾಧಕರಿಗೆ ಅವುಗಳನ್ನು ನೀಡಿ ಗೌರವಿಸುತ್ತ ಬರುತ್ತಿದ್ದರು.
ಧವಲಾ,ಜಯಧವಲಾ,ಮಹಾಧವಲಾ ಗ್ರಂಥಗಳ 42 ಸಂಪುಟಗಳ ಕನ್ನಡ ಅನುವಾದ ಮಾಡಿಸಿ,ಅವುಗಳನ್ನು ಪ್ರಕಟಿಸಿ ಅವಿಸ್ಮರಣೀಯ ಕಾಯ೯ಕೈಗೊಂಡರು.
ಪ್ರಶಸ್ತಿಗಳು: ಪೂಜ್ಯ ಶ್ರೀಗಳ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರದಲ್ಲಿನ ಸೇವೆಗಾಗಿ: ಕಮ೯ಯೋಗಿ, ಅಧ್ಯಾತ್ಮ ಯೋಗಿ,ಭಟ್ಟಾರಕ ಶಿರೋಮಣಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ವಿದೇಶ ಪ್ರವಾಸ: ಪೂಜ್ಯ ಶ್ರೀಗಳು 16ಕ್ಕೂ ಹೆಚ್ಚು ವಿದೇಶಗಳಲ್ಲಿ ಜರುಗಿದ ವಿಚಾರ ಸಂಕೀರ್ಣ,ಧರ್ಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸರಳಶೈಲಿ ಪ್ರವಚನಗಳಿಂದ ಶ್ರಾವಕರ ಮನ ಗೆದ್ದಿದ್ದಾರೆ.ಶ್ರೀಗಳು ಜೈನ ಧರ್ಮ ಇಂದಿಗೂ ತನ್ನತನ ಉಳಿಸಿಕೊಂಡು ಬರುವುದಕ್ಕೆ ಪ್ರಮುಖ ಕಾರಣ ಜೈನ ತತ್ವಶಾಸ್ತ್ರ ಗ್ರಂಥಗಳು ಹಾಗೂ ಜೈನ ವಾಸ್ತುಶಿಲ್ಪ ಕಲೆ ಎಂಬುದನ್ನು ಅರಿತು ಬಸದಿಗಳ ಜೀಣೊ೯ದ್ದಾರ, ಜೈನ ಸಾಹಿತ್ಯ ಪ್ರಕಟಣೆಗೆ ವಿಶೇಷವಾಗಿ ಒತ್ತು ನೀಡಿದ್ದಾರೆ.ಅವುಗಳ ಸಂರಕ್ಷಣೆಗಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇಲ್ಲಿಯವರೆಗೆ ನಾಲ್ಕು ಮಹಾಮಸ್ತಕಾಭಿಷೇಕಗಳು ಶ್ರೀಗಳ ನೇತೃತ್ವದಲ್ಲಿ ಮಾದರಿಗಳಾಗಿ ನೆರವೇರಿವೆ.
ಶ್ರೀ ಬಾಹುಬಲಿ ಮಕ್ಕಳ ಆಸ್ಪತ್ರೆ, ವೃದ್ದಾಶ್ರಮಗಳಂಥ ಸಮಾಜಮುಖಿ ಹಾಗೂ ಇನ್ನೂ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನಿರ್ವಹಿಸುತ್ತಾ ಈ ನಾಡಿನಲ್ಲಿ ಶಾಂತಿ ನೆಲೆಸಲು ತಮ್ಮ ಅಪಾರವಾದ ಸತತ 50 ವಷ೯ಗಳ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಾ ಬಂದಿದ್ದಾರೆ. ಇದನ್ನು ಅರಿತ ಕನಾ೯ಟಕ ಸರ್ಕಾರವು 2018ರ ರಾಷ್ಟ್ರೀಯ ಶ್ರೀ ಭ.ಮಹಾವೀರ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ.ಇದು 10 ಲಕ್ಷ ರೂಪಾಯಿ ಹಾಗೂ ಫಲಕವನ್ನು ಹೊಂದಿರುವುದು.
ಅವರನ್ನು ಎಲ್ಲ ಜಾತಿ ಮತ ಪಂಥಗಳ ಭಕ್ತರೂ ಅತಿಯಾಗಿ ಗೌರವಿಸುವ ಆದರಿಸುವ ಪ್ರೀತಿಸುವ ಅದೆಲ್ಲವೂಗಳಿಗಿಂತ ಅವರನ್ನು ಕಂಡರೆ ಹೆಚ್ಚು ಭಕ್ತಿ, ಅತಿ ಕಡಿಮೆ ಭಯ,ಇನ್ನೂ ಜಾಸ್ತಿ ಪ್ರೀತಿ, ಹೆಚ್ಚಿನ ಅಭಿಮಾನ ಇಟ್ಟುಕೊಳ್ಳುವುದಕ್ಕೆ ಕಾರಣ.
ತಾವಾಯಿತು ತಮ್ಮ ಕೆಲಸವಾಯಿತು. ಪೂಜೆ, ಧಾರ್ಮಿಕ ಕಾರ್ಯಗಳು ಜೊತೆಗೆ ಮಾತುಕತೆ, ಅಧ್ಯಯನ, ಧಾರ್ಮಿಕ ಆಚರಣೆಗಳಲ್ಲಿ ಸ್ವಾಮೀಜಿ ಸದಾ ನಿರತರು. ಮಹಮಸ್ತಕಾಭಿಷೇಕ ಸಂದರ್ಭಗಳಲ್ಲಿ ಮಾತ್ರ ಪತ್ರಿಕೆ, ದೂರದರ್ಶನಗಳಲ್ಲಿ ಅಲ್ಲಲ್ಲಿ ಕಾಣುತ್ತಾರೆ. ಮತ್ತೆ ಅವರನ್ನು ಅವುಗಳಲ್ಲಿ ಕಾಣಬೇಕಾದರೆ 12 ವರ್ಷ ಕಾಯಬೇಕಾಗಿತ್ತು.
ಇವರು ಜಾತಿ ಪಂಗಡ ಧರ್ಮಗಳ ಆಚೆ ಸಮಸ್ತರ ಗೌರವಾದರಗಳಿಗೆ ಪಾತ್ರರಾದ ಅಪರೂಪದ ಸಂತ. “ಮನೆ ಮನೆಗಳಲ್ಲಿ ಚಾರುಕೀರ್ತಿ ಮನ ಮನಗಳಲ್ಲಿ ಚಾರುಕೀತಿ೯”. ಆದುದರಿಂದ ಪೂಜ್ಯ ಶ್ರೀಗಳು ” ಬೆಳಗೊಳದ ಮಹಾಬೆಳಕು”
ಹೇ ಪರಮ ಉಪಕಾರಿ ತಮಗೆ ನಮೋಸ್ತು /
ಪರಮ ಮಂಗಳಕಾರಿ ತಮಗೆ ನಮೋಸ್ತು/
ಪರಮ ಶುಭಕಾರಿ ತಮಗೆ ನಮೋಸ್ತು/