ನಾಗರಿಕತ್ವ ತಿದ್ದುಪಡಿ ಮಸೂದೆಗೆ ವಿರೋಧ – ಅಸ್ಸಾಂ, ತ್ರಿಪುರ ಧಗಧಗ

ನಾಗರಿಕತ್ವ ತಿದ್ದುಪಡಿ ಮಸೂದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಹೋರಾಟ ಮತ್ತಷ್ಟು ವ್ಯಾಪಕವಾಗಿದ್ದು ಅಸ್ಸಾಂ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ವಿದ್ಯಾರ್ಥಿ ಸಂಘಟನೆಗಳು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗಿರುವ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಾಳೆ ಬೆಳಗ್ಗೆ ೭ ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಹತ್ತು ಜಿಲ್ಲೆಗಳಾದ ಲಖೀಂಪುರ್‌, ಧೆಮಾಜಿ, ತಿನ್ಸುಕಿಯಾ, ದಿಬ್ರುಗಢ್‌, ಚರೈದೋ, ಸಿವಸಾಗರ್‌, ಜೋಹ್ರಾತ್‌, ಗೋಲ್ಗಾಟ್, ಕಾಮರೂಪ್‌ ಜಿಲ್ಲೆಗಳಲ್ಲಿ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನೇ ಸ್ಥಗಿತಗೊಳಿಸಲಾಗಿದೆ.

ಅಸ್ಸಾಂನಲ್ಲಿ ಭಾರತೀಯ ಸೇನೆಯ ಎರಡು ಕಂಪನಿಗಳು ಮತ್ತು ತ್ರಿಪುರಾದಲ್ಲಿ ಮೂರು ಕಂಪನಿಗಳನ್ನು ನಿಯೋಜಿಸಲಾಗಿದೆ. ಜಮ್ಮುಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದ ೫ ಸಾವಿರ ಅರೆಸೇನಾ ಪಡೆ ಸೈನಿಕರನ್ನು ಅಸ್ಸಾಂಗೆ ಸ್ಥಳಾಂತರಿಸಲಾಗಿದೆ. ಈಶಾನ್ತ ರಾಜ್ಯಗಳಿಗೆ ಒಟ್ಟು ೫ ಸಾವಿರ ಅರೆಸೇನಾ ಸೈನಿಕರನ್ನು ಕಳುಹಿಸಿಕೊಡಲಾಗಿದೆ.

ಪ್ರತಿಭಟನಾಕಾರರ ಮೇಲೆ ಲಾಠಿಜಾರ್ಜ್ ಮತ್ತು ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಗುವಾಹಟಿ ಮತ್ತು ದಿಬ್ರುಗಢ್‌ ವಿಶ್ವವಿದ್ಯಾಲಯ ನಡೆಸಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಜಂತರ್‌ಮಂತರ್‌ ಎದುರು ಈಶಾನ್ಯ ರಾಜ್ಯ ಸಂಘಟೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.

LEAVE A REPLY

Please enter your comment!
Please enter your name here