ಕುಸಿದ Byjus​ ಆದಾಯ – ಆಕಾಶಕ್ಕೇರಿದ ನಷ್ಟ – ಏನಾಗ್ತಿದೆ Byjusನಲ್ಲಿ..?

Byju’s
Byju’s
ದೇಶದ ಪ್ರಮುಖ ಎಜುಟೆಕ್ (EduTech)​ ಕಂಪನಿ ಬೈಜುಸ್ (Byju’s)​ ಅಪಾರ ಪ್ರಮಾಣದ ನಷ್ಟ ಅನುಭವಿಸಿದೆ.
ಬುಧವಾರ ಪ್ರಕಟವಾಗಿರುವ ಬೈಜುಸ್​ ಕಂಪನಿಯ ಲೆಕ್ಕಪರಿಶೋಧಕ ವರದಿ (Audit Report) ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಬೈಜುಸ್​ (Byju’s) ನಷ್ಟ (Loss) ಒಂದು ವರ್ಷದ ಅವಧಿಯಲ್ಲಿ 20 ಪಟ್ಟು ಹೆಚ್ಚಳ ಆಗಿದೆ. ಒಂದು ವರ್ಷದ ಅವಧಿಯಲ್ಲಿ ಕಂಪನಿಯ ಆದಾಯ (Revenue) ಶೇಕಡಾ 3ರಷ್ಟು ಕುಸಿದಿದೆ.
ಈ ಹಿಂದಿನ ವರ್ಷ ಬೈಜುಸ್​ ಆದಾಯ 2,704 ಕೋಟಿ ರೂಪಾಯಿ ಇತ್ತು. ಆದರೆ ಈ ವರ್ಷ ಬೈಜುಸ್​ ಆದಾಯ 2,428 ಕೋಟಿ ರೂಪಾಯಿಗೆ ಕುಸಿದಿದೆ.
ಈ ಹಿಂದಿನ ವರ್ಷ (2019-20)ರಲ್ಲಿ ಬೈಜುಸ್​ 231 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಆದರೆ 2020-21ನೇ ಆರ್ಥಿಕ ವರ್ಷದಲ್ಲಿ ಕಂಪನಿ 20 ಪಟ್ಟು ಅಂದರೆ ಬರೋಬ್ಬರೀ 4,589 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
ಕಾರ್ಪೋರೇಟ್​ ವ್ಯವಹಾರಗಳ ಸಚಿವಾಲಯಕ್ಕೆ (MCA) ಬೈಜುಸ್​ ಇನ್ನೂ ತನ್ನ ವಾರ್ಷಿಕ ವರದಿಯನ್ನು (Annual Report) ಸಲ್ಲಿಸಿಲ್ಲ. ವಾರ್ಷಿಕ ವರದಿ ಸಲ್ಲಿಕೆಗೆ ಕಾರ್ಪೋರೇಟ್​​ ವ್ಯವಹಾರಗಳ ಸಚಿವಾಲಯ ಬೈಜುಸ್​ಗೆ ನೀಡಿದ್ದ ನಾಲ್ಕು ಗಡುವೂ ಮುಕ್ತಾಯ ಆಗಿದೆ.
ಈ ಮಧ್ಯೆ ಕಾಂಗ್ರೆಸ್​ ಸಂಸದರೂ ಆಗಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ (Karti Chidambaram) ಅವರು ಬೈಜುಸ್​ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಕಾರ್ಪೋರೇಟ್​ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಗಂಭೀರ ವಂಚನೆಗಳ ತನಿಖಾ ಸಂಸ್ಥೆಗೆ (SFIO) ಪತ್ರ ಬರೆದಿದ್ದಾರೆ.
ಕೋವಿಡ್​ (Covid) ಕಾಲಘಟ್ಟದಲ್ಲಿ ಗಳಿಕೆ ಹೆಚ್ಚಿಸಿಕೊಂಡಿದ್ದ ಎಜುಟೆಕ್​ ಕಂಪನಿಗಳು ಕೋವಿಡ್​ ಸೋಂಕು ಇಳಿಮುಖ ಆಗಿ ಶಾಲಾ-ಕಾಲೇಜುಗಳು ಮತ್ತೆ ಆರಂಭ ಆದ ಬಳಿಕ ಎಜುಟೆಕ್​ ಕಂಪನಿಗಳ ಆದಾಯ ಕುಸಿಯಲು ಶುರುವಾಗಿತ್ತು.
ಈಗಾಗಲೇ ಬೈಜುಸ್ (Byju’s)​ ವೆಚ್ಚ ಕಡಿತದ ಭಾಗವಾಗಿ 2,500 ಮಂದಿ ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ (Layoff).

LEAVE A REPLY

Please enter your comment!
Please enter your name here