ADVERTISEMENT
ವಿಶ್ವದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಪೋಕ್ಸೋ ಪ್ರಕರಣದಿಂದ ನ್ಯಾಯಾಲಯಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಒಪ್ಪಿತ ಲೈಂಗಿಕ ಕ್ರಿಯೆಯ ವಯಸ್ಸನ್ನು ಇಳಿಸುವಂತೆ ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಲೈಂಗಿಕ ಕ್ರಿಯೆಗಳು ಕೇವಲ ಮದುವೆಗೆ ಸೀಮಿತವಾಗಿಲ್ಲ, ಹೀಗಾಗಿ ಒಪ್ಪಿತ ಲೈಂಗಿಕ ಕ್ರಿಯೆಯ ವಯಸ್ಸನ್ನು ಮದುವೆ ವಯಸ್ಸಿನಿಂದ ಪ್ರತ್ಯೇಕಿಸುವುದು ಸೂಕ್ತ. ಪ್ರೇಮ ಸಂಬಂಧವನ್ನು ಅಪರಾಧೀಕರಣಗೊಳಿಸುವುದರಿಂದ ನ್ಯಾಯಾಲಯದ ಮೇಲೂ ಒತ್ತಡ ಹೆಚ್ಚಾಗುತ್ತಿದೆ. ಇಂತಹ ಪ್ರಕರಣದಲ್ಲಿ ದೂರುದಾರ ಸಂತ್ರಸ್ತೆಯರೇ ಆರೋಪಿ ವಿರುದ್ಧದ ಆರೋಪಗಳನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲ್ಲ
ಎಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಭಾರ್ತಿ ಡಂಗ್ರೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ದೋಷಿ ಎಂದು ಕೆಳ ಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ವಜಾಗೊಳಿಸಿ ಆರೋಪ ಮುಕ್ತಗೊಳಿಸಿದ ಹೈಕೋರ್ಟ್ ಲೈಂಗಿಕ ಕ್ರಿಯೆಗೆ ವಯಸ್ಸಿನ ಮಿತಿ ಇಳಿಕೆಗೆ ಸಲಹೆ ನೀಡಿದೆ.
2016ರಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಅಪ್ರಾಪ್ರೆಯನ್ನು ಅತ್ಯಾಚಾರ ಎಸಗಿದ ಆರೋಪದಡಿ ಕೆಳಹಂತದ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಈ ಕೃತ್ಯ ನಡೆದಾಗ ಆ ಬಾಲಕಿಗೆ 17 ವರ್ಷ 6 ತಿಂಗಳು ವಯಸ್ಸಾಗಿತ್ತು. ತಾವಿಬ್ಬರೂ ಪರಸ್ಪರ ಒಪ್ಪಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿಯೂ ಮತ್ತು ಮುಸ್ಲಿಂ ಕಾನೂನಿನ ಪ್ರಕಾರ ತನಗೆ ಮದುವೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಅತ್ಯಾಚಾರವಲ್ಲ ಎಂದು ಬಾಲಕಿಯೂ ವಾದಿಸಿದ್ದಳು.
ಆದರೆ ಕೆಳಹಂತದ ನ್ಯಾಯಾಲಯ ಆ ವಾದವನ್ನು ಒಪ್ಪಿರಲಿಲ್ಲ. ಪೋಕ್ಸೋ ಕಾನೂನಿನ ಪ್ರಕಾರ ಆಕೆ ಅಪ್ರಾಪ್ತಗಳಾಗಿರುವ ಕಾರಣ ಆ ಲೈಂಗಿಕ ಕ್ರಿಯೆಗೆ ಆಕೆಯ ಒಪ್ಪಿಗೆ ಇತ್ತೆನ್ನೆವುದು ಮುಖ್ಯವಲ್ಲ, ಇದು ಅತ್ಯಾಚಾರ ಎಂದು ಪರಿಗಣಿಸಿ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿತ್ತು.
ಆರೋಪಿಯನ್ನು ದೋಷಿ ಎಂದು ಪರಿಗಣಿಸಿರುವ ಕೆಳಹಂತದ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್, ಇದು ಒಪ್ಪಿತ ಲೈಂಗಿಕ ಕ್ರಿಯೆ ಎನ್ನುವುದಕ್ಕೆ ಎಲ್ಲ ಸಾಕ್ಷ್ಯಗಳಿವೆ ಎಂದು ಹೇಳಿ ಆರೋಪಮುಕ್ತಗೊಳಿಸಿದೆ.
ಲೈಂಗಿಕ ಕ್ರಿಯೆಗೆ ವಿಶ್ವದಲ್ಲೇ ಭಾರತದಲ್ಲಿ ಅತೀ ಹೆಚ್ಚು ವಯಸ್ಸಿನ ಮಿತಿಯನ್ನು ಹಾಕಲಾಗಿದೆ. ಭಾರತದಲ್ಲಿ ಮದುವೆಗೆ ಗಂಡು ಮಕ್ಕಳಿಗೆ 21 ವರ್ಷ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷ ವಯಸ್ಸಿನ ಮಿತಿ ಹಾಕಲಾಗಿದೆ. ಜರ್ಮನಿ, ಇಟಲಿ, ಪೋರ್ಚುಗಲ್, ಹಂಗೇರಿಯಲ್ಲಿ ಒಪ್ಪಿತ ಲೈಂಗಿಕ ಕ್ರಿಯೆಗೆ 14 ವರ್ಷದ ಮಿತಿ ಇದೆ. ಲಂಡನ್ನಲ್ಲಿ 16 ವರ್ಷ, ಜಪಾನ್ನಲ್ಲಿ 13 ವರ್ಷದ ಮಿತಿ ಇದೆ. ವಿಶ್ವದಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸಿ ವಯಸ್ಸಿನ ಇಳಿಕೆ
ಮಾಡುವಂತೆ ಹೈಕೋರ್ಟ್ ಸಲಹೆ ನೀಡಿದೆ.
ADVERTISEMENT