ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಒಡೆತನದ ಆರ್ಆರ್ ನಗರದಲ್ಲಿರುವ ಶಾಲೆಗೆ ಸೋಮವಾರ ಬಾಂಬ್ ಬೆದರಿಕೆ ಬಂದಿತ್ತು. ಹುಚ್ಚಾ ವೆಂಕಟ್ ಹೆಸರಿನ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಅದೇ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ.
ಬಾಂಬ್ ಬೆದರಿಕೆ ಬಂದಿದ್ದ ನ್ಯಾಶನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ನಲ್ಲಿಯೇ ಎಸ್ಎಸ್ಎಲ್ಸಿ ಓದುತ್ತಿದ್ದ ವಿದ್ಯಾರ್ಥಿಯಿಂದಲೇ ಈ ಕೃತ್ಯ ನಡೆದಿದೆ ಎಂಬುದು ಇದೀಗ ಬಹಿರಂಗವಾಗಿದೆ. ಇದೇ ತಿಂಗಳು 21 ರಂದು 10ನೇ ತರಗತಿಯ ಮೊದಲನೇ ಪರೀಕ್ಷೆ ಇತ್ತು. ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ವಿದ್ಯಾರ್ಥಿ ಈ ರೀತಿ ಪ್ಲ್ಯಾನ್ ಮಾಡಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಆರ್ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಹುಡುಗನನ್ನು ವಿಚಾರಣೆ ನಡೆಸಿ, ಬಾಲ ಅಪರಾಧಿಗಳ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿದ್ದಾರೆ.