ಗೆದ್ದ ಯಡಿಯೂರಪ್ಪ, ಬಿದ್ದ ಸಿದ್ದರಾಮಯ್ಯ-ಕುಮಾರಸ್ವಾಮಿ

ಉಪ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿದ್ದು ೧೫ರಲ್ಲಿ ೧೨ ಕ್ಷೇತ್ರಗಳನ್ನು ಜಯಿಸಿಕೊಂಡಿದ್ದರೆ, ಕಾಂಗ್ರೆಸ್‌ ಕೇವಲ ೨ ಸ್ಥಾನವನ್ನಷ್ಟೇ ಗೆದ್ದುಕೊಂಡಿದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಜಯ ಸಾಧಿಸಿದರೆ ದೇವೇಗೌಡರ ಜೆಡಿಎಸ್‌ ಒಂದೇ ಒಂದು ಸ್ಥಾನವನ್ನೂ ಗೆಲ್ಲದೇ ಸೊನ್ನೆ ಸುತ್ತಿದೆ. ಅದರಲ್ಲೂ ಜೆಡಿಎಸ್‌ ಭದ್ರಕೋಟೆ ಎನ್ನಲಾಗುವ ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆಯಲ್ಲೇ ಸೋತು ಆಘಾತ ಅನುಭವಿಸಿದೆ.

೧೨ ಸ್ಥಾನಗಳ ಗೆಲುವಿನೊಂದಿಗೆ ಸದ್ಯ ೨೨೨ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಬಲಾಬಲ ೧೧೭ಕ್ಕೆ ಏರಿದ್ದು, ಯಡಿಯೂರಪ್ಪ ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್‌ ೬೮, ಜೆಡಿಎಸ್‌ ೩೪, ಒಬ್ಬ ಪಕ್ಷೇತರ ಶಾಸಕರನ್ನು ಒಳಗೊಂಡಿದೆ. ಸದ್ಯ ಬಹುಮತಕ್ಕೆ ಬೇಕಿರುವುದು ೧೧೨. ರಾಜರಾಜೇಶ್ವರಿ ಮತ್ತು ಮಸ್ಕಿ ಕ್ಷೇತ್ರಗಳಿಗೆ ಇನ್ನಷ್ಟೇ ಉಪ ಚುನಾವಣೆ ಘೋಷಣೆ ಆಗಬೇಕಿದೆ.

ಬಿಜೆಪಿ ಗೆದ್ದ ಕ್ಷೇತ್ರಗಳು:

ಕೆ ಆರ್‌ ಪೇಟೆ – ಕೆ ಸಿ ನಾರಾಯಣಗೌಡ, ಚಿಕ್ಕಬಳ್ಳಾಪುರ – ಡಾ ಕೆ ಸುಧಾಕರ್‌, ಗೋಕಾಕ್‌ – ರಮೇಶ್‌ ಜಾರಕಿಹೊಳಿ, ಅಥಣಿ – ಮಹೇಶ್‌ ಕುಮಠಳ್ಳಿ, ಕಾಗವಾಡ – ಶ್ರೀಮಂತ ಪಾಟೀಲ್‌, ರಾಣೇಬೆನ್ನೂರು – ಅರುಣ್‌ ಕುಮಾರ್ ಪೂಜಾರ, ಹಿರೇಕೆರೂರು – ಬಿ ಸಿ ಪಾಟೀಲ್‌, ವಿಜಯನಗರ – ಆನಂದ್‌ ಸಿಂಗ್‌, ಮಹಾಲಕ್ಷ್ಮೀಪುರಂ – ಗೋಪಾಲಯ್ಯ, ಯಶವಂತಪುರ – ಎಸ್‌ ಟಿ ಸೋಮಶೇಖರ್‌, ಕೆ ಆರ್‌ಪುರಂ – ಬೈರತಿ ಬಸವರಾಜ್‌, ಯಲ್ಲಾಪುರ – ಶಿವರಾಂ ಹೆಬ್ಬಾರ್‌

ಕಾಂಗ್ರೆಸ್‌ ಗೆದ್ದ ಕ್ಷೇತ್ರಗಳು: ಶಿವಾಜಿನಗರ – ರಿಜ್ವಾನ್‌ ಅರ್ಷದ್‌, ಹುಣಸೂರು – ಮಂಜುನಾಥ್‌

ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಗಿ ಬಿಜೆಪಿಯಿಂದ ಬಂಡೆದ್ದು ನಿಂತಿದ್ದ ಶರತ್‌ ಬಚ್ಚೇಗೌಡ ಜಯ ಗಳಿಸಿದ್ದು, ಎಂ ಟಿ ಬಿ ನಾಗರಾಜ್‌ಗೆ ಸೋಲಾಗಿದೆ.

ಕೆ ಆರ್‌ ಪೇಟೆಯಲ್ಲಿ ಬಿಜೆಪಿ ಇತಿಹಾಸ – ಜೆಡಿಎಸ್‌ಗೆ ಆಘಾತ:

ಮಾಜಿ ಪ್ರಧಾನಿ ದೇವೇಗೌಡರ ಪಕ್ಷ ಸಾಂಪ್ರದಾಯಿಕ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ತನ್ನ ನೆಲೆ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲಿನ ಬಳಿಕವೂ ಕೆ ಆರ್‌ ಪೇಟೆಯಲ್ಲಿ ಗೆಲ್ಲುವ ಮೂಲಕ ಸಕ್ಕರೆ ನಾಡಲ್ಲಿ ತಮಗೆ ಎದುರಾಳಿಗಳ ಎನ್ನುವುದನ್ನು ಸಾಬೀತುಪಡಿಸುವ ಉಮೇದಿನಲ್ಲಿತ್ತು. ಆದರೆ ಕೆ ಆರ್‌ ಪೇಟೆಯನ್ನು ಬಾಚಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ತನ್ನ ಖಾತೆಯನ್ನ ತೆರೆದಿದೆ. ಈ ಮೂಲಕ ಹುಟ್ಟೂರು ಯಡಿಯೂರಪ್ಪಗೆ ಬಳುವಳಿ ನೀಡಿದೆ.

ಹಾವೇರಿಯಲ್ಲಿ ಕಾಂಗ್ರೆಸ್ಸೇ ಇಲ್ಲ:

ಉಪ ಚುನಾವಣೆ ನಡೆದಿದ್ದ ಹಾವೇರಿಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋತಿದೆ. ರಾಣೇಬೆನ್ನೂರಲ್ಲಿ ಕೆ ಬಿ ಕೋಳಿವಾಡ ಸೋಲು ಕಂಡರೆ, ಹಿರೇಕೆರೂರಲ್ಲಿ ಬನ್ನಿಕೋಡ್‌ಗೆ ಜಯ ಸಿಗಲಿಲ್ಲ.

ಚಿಕ್ಕಬಳ್ಳಾಪುರದಲ್ಲೂ ಹಾರಿದ ಬಿಜೆಪಿ ಧ್ವಜ:

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್‌ ಗೆಲುವಿನೊಂದಿಗೆ ಬಿಜೆಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಖಾತೆಗೆ ತೆರೆದಿದೆ.

LEAVE A REPLY

Please enter your comment!
Please enter your name here