ಕರ್ನಾಟಕದಲ್ಲಿ ಬಿಜೆಪಿಗೆ ಸೋಲಿನ ಆತಂಕ – ಕಾಂಗ್ರೆಸ್ ನಾಯಕರು ಮೇಲೆ IT, CBI, ED ದಾಳಿಗೆ ಸಿದ್ಧತೆ

ಐಟಿ, ಇಡಿ ಹಾಗೂ ಸಿಬಿಐ ಮುಂತಾದ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ರಾಜ್ಯದ ಕಾಂಗ್ರೆಸ್‌ ನಾಯಕರನ್ನು ಬೆದರಿಸಲು ಬಿಜೆಪಿ ಸರ್ಕಾರ ನಡೆಸಿರುವ ಷಡ್ಯಂತ್ರದ ಬಗ್ಗೆ ದೆಹಲಿಯಲ್ಲಿ ತುರ್ತು ಸುದ್ದಿ ಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.

ಬಿಜೆಪಿಗೆ ಕರ್ನಾಟಕದಲ್ಲಿ ಸೋಲಿನ ಭೀತಿ ಆರಂಭವಾಗಿದೆ. ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳುತ್ತಿವೆ. ಸುರ್ಜೇವಾಲಾ ಅವರು ಹೇಳಿದಂತೆ ಹಲವು ಹಾಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ನಿಗಮ ಮಂಡಳಿಯ ಅಧ್ಯಕ್ಷರು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಇದೆ ಎಂದು ಕರ್ನಾಟಕದ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಕಾರಣದಿಂದ ಹಾಲಿ ಶಾಸಕರು ಕಾಂಗ್ರೆಸ್‌ ಸೇರುತ್ತಿದ್ದಾರೆ. ಅವರ್ಯಾರು ಮೂರ್ಖರಲ್ಲ, ತಾವು ಬಿಜೆಪಿಯಲ್ಲಿಯೇ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎಂಬುದು ಅವರಿಗೆ ಗೊತ್ತಾಗಿದೆ.

ಬಿಜೆಪಿ ಹೈಕಮಾಂಡ್‌ ಗೆ ಕೂಡ ಕರ್ನಾಟಕದ ಬಿಜೆಪಿ ಮುಳುಗುತ್ತಿದೆ, ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಿದೆ. ತಮ್ಮ ದ್ವೇಷ ರಾಜಕೀಯ ಮತ್ತು ಹಿಂದುತ್ವದ ಅಜೆಂಡಾ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ ಎಂಬುದು ಅವರಿಗೆ ಅರ್ಥವಾಗಿದೆ. ಅವರಿಗೆ ಉಳಿದಿರುವ ಏಕೈಕ ಮಾರ್ಗವೆಂದರೆ ಅಧಿಕಾರದ ದುರುಪಯೋಗ ಮತ್ತು ತಮ್ಮ ಹಣಬಲದ ಬಳಕೆ. ಹಣ ನೀಡಿದರೂ ಕೂಡ ರಾಜ್ಯದ ಜನ ಕಾಂಗ್ರೆಸ್‌ ಗೆ ಮತ ನೀಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಬಿಜೆಪಿ ಸರ್ಕಾರ ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯದ ಮತದಾರರಿಗೆ ತಾವು ಹಿಂದಿನ ಚುನಾವಣೆಯಲ್ಲಿ ಮಾಡಿದ ತಪ್ಪಿನ ಅರಿವಾಗಿದೆ, ಜನ ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಸ್ಮರಿಸುತ್ತಿದ್ದಾರೆ. ರಾಜ್ಯದ ಎಲ್ಲಿಗೇ ಹೋದರು ಬಹುತೇಕ ಜನ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ, ಇದರಿಂದ ಬಿಜೆಪಿಗರು ಬೆದರಿದ್ದಾರೆ.

ನಮಗೆ ನಂಬಿಕಾರ್ಹ ಮೂಲದಿಂದ ಮಾಹಿತಿ ಸಿಕ್ಕಿದ್ದು, ಬಿಜೆಪಿಯವರು ಐ.ಟಿ, ಇ.ಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಿದ್ದಾರೆ. ಈಗಾಗಲೇ ಅವರು ಸಾವಿರಕ್ಕೂ ಅಧಿಕ ಆದಾಯ ತೆರಿಗೆ ಹಾಗೂ ಇ.ಡಿ ಅಧಿಕಾರಿಗಳನ್ನು ಕಳುಹಿಸಿದ್ದು, ಅವರ ಮೂಲಕ ಕಾಂಗ್ರೆಸ್‌ ನ ಅಭ್ಯರ್ಥಿಗಳು, ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುವವರು ಹಾಗೂ ಕಾಂಗ್ರೆಸ್‌ ಬಗೆಗೆ ಸಹಾನುಭೂತಿ ಹೊಂದಿರುವ ಜನರ ಮೇಲೆ ದಾಳಿ ಮಾಡಲು ಯೋಜಿಸಲಾಗಿದೆ. ಈ ಅಧಿಕಾರಿಗಳು ನಮ್ಮ ಪಕ್ಷದವರನ್ನು ಬೆದರಿಸುತ್ತಿದ್ದಾರೆ. ಇದು ಸ್ಪಷ್ಟವಾಗಿ ಅಧಿಕಾರದ ದುರುಪಯೋಗ ಪ್ರಕರಣವಾಗುತ್ತದೆ.

ಕಾಂಗ್ರೆಸ್‌ ಪಕ್ಷಕ್ಕೆ ಯಾರೂ ಬೆಂಬಲ ನೀಡಬಾರದು ಎಂಬುದು ಬಿಜೆಪಿಯವರ ಉದ್ದೇಶ. ಇದಕ್ಕೆ ನಮ್ಮ ಕಾರ್ಯಕರ್ತರು ಮತ್ತು ನಾಯಕರು ಬಗ್ಗುವವರಲ್ಲ.

ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿರುವ ಬಿಜೆಪಿ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಾವು ಬಿಜೆಪಿಯ ಹೀನ ರಾಜಕೀಯದ ವಿರುದ್ಧ ಹೋರಾಟ ಮಾಡುತ್ತೇವೆ.