ಮಂಗಳವಾರ ಅಂದರೆ ಡಿಸೆಂಬರ್ 17ರಂದು ಲೋಕಸಭೆಯಲ್ಲಿ ʻಒಂದೇ ದೇಶ ಒಂದೇ ಚುನಾವಣೆʼ ಮಸೂದೆ ಮಂಡನೆಯಾಗಿದೆ. ಸದನದಲ್ಲಿ ಮಸೂದೆಯನ್ನು ಮಂಡನೆ ಮಾಡುವ ಸಂಬಂಧ ನಡೆದ ಎಲೆಕ್ಟ್ರಾನಿಕ್ ಮತದಾನದಲ್ಲಿ ಮಸೂದೆಯನ್ನು ಮಂಡನೆ ಮಾಡುವ ಪರ 269 ಸಂಸದರು ಮತ ಚಲಾಯಿಸಿದ್ದರೆ, ಮಸೂದೆಯನ್ನು ಮಂಡನೆ ಮಾಡಬಾರದು ಎಂದು ವಿರೋಧ ಪಕ್ಷಗಳ 196 ಸಂಸದರು ಮತ ಹಾಕಿದ್ದಾರೆ.
ಆದರೆ ಎನ್ಡಿಎ ಮೈತ್ರಿಕೂಟ ನಾಯಕ ಪಕ್ಷವಾಗಿರುವ ಬಿಜೆಪಿಯ 20ಕ್ಕೂ ಅಧಿಕ ಸಂಸದರೇ ಮತದಾನದಿಂದ ಗೈರಾಗಿದ್ದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ. ಮಸೂದೆ ಮಂಡನೆಯ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪಕ್ಷದ ಎಲ್ಲ ಸಂಸದರೂ ಹಾಜರಿರುವಂತೆ ಬಿಜೆಪಿ ವಿಪ್ ಹೊರಡಿಸಿತ್ತು. ಆದರೆ ಪಕ್ಷ ಹೊರಡಿಸಿದ್ದ ವಿಪ್ ಹೊರತಾಗಿಯೂ 20ಕ್ಕೂ ಅಧಿಕ ಬಿಜೆಪಿ ಸಂಸದರು ಮತದಾನದ ವೇಳೆ ಗೈರಾಗಿದ್ದರು.
ಸಂವಿಧಾನ ತಿದ್ದುಪಡಿ ಆಗಬೇಕಿರುವ ಈ ಮಸೂದೆಯ ಮಂಡನೆಯ ವೇಳೆ ಸರಳ ಬಹುಮತದಷ್ಟು ಮತಗಳನ್ನೂ (ಲೋಕಸಭೆಯ ಒಟ್ಟು 543 ಸಂಸದರ ಪೈಕಿ ಸರಳ ಬಹುಮತ 272) ಪಡೆಯಲು ಪ್ರಧಾನಿ ಮೋದಿ ಸರ್ಕಾರ ವಿಫಲವಾಗಿದೆ. ಇದು ಕಾಂಗ್ರೆಸ್ ಒಳಗೊಂಡು ವಿರೋಧ ಪಕ್ಷಗಳ ಕೈಗೆ ಅಸ್ತ್ರ ಕೊಟ್ಟಿದೆ.
ಮಸೂದೆ ಮಂಡನೆ ವೇಳೆ ಗೈರಾದ 20ಕ್ಕೂ ಅಧಿಕ ಸಂಸದರಿಗೆ ಕಾರಣ ಕೇಳಿ ನೋಟಿಸ್ ನೀಡುವುದಕ್ಕೆ ಬಿಜೆಪಿ ನಿರ್ಧರಿಸಿದೆ ಎಂದು ಇಂಗ್ಲೀಷ್ ಮತ್ತು ಹಿಂದಿ ಮಾಧ್ಯಮಗಳು ವರದಿ ಮಾಡಿವೆ. ವಿಚಿತ್ರ ಎಂದರೆ ಮಸೂದೆ ಮೇಲಿನ ಮತದಾನದ ವೇಳೆ ಲೋಕಸಭೆಯಲ್ಲಿ ಸಭಾ ನಾಯಕರಾಗಿರುವ ಸ್ವತಃ ನರೇಂದ್ರ ಮೋದಿಯವರೇ ಗೈರಾಗಿದ್ದರು. ಹಾಗಾದ್ರೆ ಪ್ರಧಾನಿ ಮೋದಿಯವರಿಗೂ ಬಿಜೆಪಿ ಕಾರಣ ಕೇಳಿ ನೋಟಿಸ್ ನೀಡುತ್ತಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಪ್ರಶ್ನಿಸ್ತಿದ್ದಾರೆ.
ADVERTISEMENT
ADVERTISEMENT