ಬಿಜೆಪಿ ನಾಯಕ ಯಶಪಾಲ್​ ಸುವರ್ಣ ವಿರುದ್ಧ FIR- ಬಂಧಿಸದ ಪೊಲೀಸರು – ಕೊಲೆಗಡುಕರಿಗೆ ರಕ್ಷಣೆಯೇ..? – ಕಾಂಗ್ರೆಸ್​ ಪ್ರಶ್ನೆ

ಉಡುಪಿ ಜಿಲ್ಲೆಯ ಮಹಾಲಕ್ಷ್ಮೀ ಕ್ರೆಡಿಟ್​ ಕೋ ಆಪರೇಟಿವ್​ ಬ್ಯಾಂಕ್​ನ ಅಧ್ಯಕ್ಷ ಮತ್ತು ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್​ ಸುವರ್ಣ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್​ಐಆರ್​ ದಾಖಲಾಗಿದೆ.

ಮಲ್ಪೆ ಪೊಲೀಸ್​ ಠಾಣೆಯಲ್ಲಿ ಸೊಸೈಟಿ ಅಧ್ಯಕ್ಷ ಯಶಪಾಲ್​ ಸುವರ್ಣ, ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಗದೀಶ್​ ಮೊಗವೀರ, ಮಾಜಿ ವ್ಯವಸ್ಥಾಪಕ ನಿರ್ದೇಶಕ ಶೀನ್​ ಕೆ ಗಂಗೊಳ್ಳಿ ಮತ್ತು ಸೊಸೈಟಿಯಿಂದ ಸಾಲ ಪಡೆದಿದ್ದ ರಿಯಾಜ್​ ಎಂಬವರ ಮೇಲೆ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಮತ್ತು ಎಸ್​ಸಿ ಎಸ್​ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

ಸೊಸೈಟಿಯ ಮಲ್ಪೆ ಶಾಖೆಯ ಮ್ಯಾನೇಜರ್​ ಆಗಿದ್ದ ದಲಿತ ಸಮುದಾಯಕ್ಕೆ ಸೇರಿದ್ದ ಸುಬ್ಬಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಅವರ ಸಹೋದರ ಮಲ್ಪೆ ಪೊಲೀಸರಿಗೆ ದೂರು ನೀಡಿದ್ದರು.

ಮಾರ್ಚ್​ 8ರಂದು ರಾಜ್​ಮಹಲ್​ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಬ್ಬಣ್ಣ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಯಶಪಾಲ್​ ಸುವರ್ಣ ಒಳಗೊಂಡಂತೆ ನಾಲ್ವರ ವಿರುದ್ಧ ತಮ್ಮ ಸಾವಿಗೆ ಇವರೇ ಕಾರಣ ಎಂದು ದೂರಿದ್ದರು.

ಈ ನಡುವೆ ಯಶಪಾಲ್​ ಸುವರ್ಣ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಕಾಂಗ್ರೆಸ್​ ಪ್ರಶ್ನೆ ಕೇಳಿದೆ.

ಉಡುಪಿಯ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕಿನ ಮ್ಯಾನೇಜರ್ ಡೆತ್ ನೋಟ್‌ನಲ್ಲಿ ಯಶಪಾಲ್ ಸುವರ್ಣನ ವಿರುದ್ದ ನೇರವಾಗಿ ಕಿರುಕುಳದ ಆರೋಪ ಮಾಡಿದ್ದರೂ ಆತನನ್ನು ಬಂಧಿಸಿಲ್ಲವೇಕೆ? ಕಾನೂನನ್ನು ಕಡಲೇಬೀಜ ಮಾಡಿಕೊಂಡ @JnanendraAraga ಅವರೇ, ಕೊಲೆಗಡುಕರ ರಕ್ಷಣೆಯೇ ಗೃಹಸಚಿವರಾಗಿ ನಿಮ್ಮ ಹೊಣೆಯೇ? ಬಿಜೆಪಿಗರ ವಿರುದ್ಧ ಕಾನೂನು ಕೈ ಕಟ್ಟಿ ನಿಲ್ಲುವುದೇಕೆ?

#40PercentSarkara ದ ಕಮಿಷನ್ ಕಿರುಕುಳಕ್ಕೆ ಗುತ್ತಿಗೆದಾರರ ಆತ್ಮಹತ್ಯೆಯ ನಂತರ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಸರದಿ. ಉಡುಪಿಯ ಮಹಾಲಕ್ಷ್ಮಿ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷನಾಗಿರುವ ಯಶ್‌ಪಾಲ್ ಸುವರ್ಣನನ್ನು ಹೆಸರಿಸಿ ಅದೇ ಬ್ಯಾಂಕಿನ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಸಂಗತಿ ಬೆಳಕಿಗೆ ಬಂದಿದೆ, ಸರ್ಕಾರ ಮಾತ್ರ ರಕ್ಷಣೆಗೆ ನಿಂತಿದೆ.

ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಹಿಜಾಬ್​ ವಿವಾದದಲ್ಲಿ ಮುಂಚೂಣಿಯಲ್ಲಿದ್ದ ಯಶಪಾಲ್​ ಸುವರ್ಣ:

ಬಿಜೆಪಿಯಿಂದ ಈ ಬಾರಿ ವಿಧಾನಸಭಾ ಚುನಾವಣೆಗೆ ಟಿಕೆಟ್​ ಆಕಾಂಕ್ಷಿಯೂ ಆಗಿರುವ ಯಶಪಾಲ್​ ಅವರು ಉಡುಪಿಯಲ್ಲಿ ಉಂಟಾಗಿದ್ದ ಹಿಜಾಬ್​ ವಿವಾದದ ಮೂಲಕ ಸುದ್ದಿಯಲ್ಲಿದ್ದರು.

LEAVE A REPLY

Please enter your comment!
Please enter your name here