ಕಾಶ್ಮೀರಿ ಪಂಡಿತರ ಹತ್ಯೆ ಮಾಡುವ ಮೂಲಕ ಅವರನ್ನು ಮತ್ತೆ ಕಾಶ್ಮೀರದಿಂದ ಹೊರ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಇಂತಹ ಪ್ರಯತ್ನವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ‘ಕ್ರಿಯಾ ಯೋಜನೆ’ ಜಾರಿ ಮಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಆಮ್ ಆದ್ಮಿ ಪಕ್ಷದ ‘ಜನ್ ಆಕ್ರೋಶ್ ರ್ಯಾಲಿ’ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರಿ ಪಂಡಿತರ ಮೇಲೆ 1990 ರ ದಶಕದಲ್ಲಿ ನಡೆದ ಘಟನೆ ಮತ್ತೆ ಮರಳಿ ನಡೆಯುತ್ತಿದೆ. “ಬಿಜೆಪಿಗೆ ಕಾಶ್ಮೀರವನ್ನು ನಿಭಾಯಿಸಲು ಸಾಧ್ಯವಿಲ್ಲ, ಅವರಿಗೆ ಕೊಳಕು ರಾಜಕೀಯ ಮಾಡಲು ಮಾತ್ರ ತಿಳಿದಿದೆ. ದಯವಿಟ್ಟು ಕಾಶ್ಮೀರದ ಮೇಲೆ ರಾಜಕೀಯ ಮಾಡಬೇಡಿ” ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರವು ಕಾಶ್ಮೀರಿ ಪಂಡಿತರು ತಮ್ಮ ಹತ್ಯೆಗಳನ್ನು ಪ್ರತಿಭಟಿಸಲು ಸಹ ಅವರಿಗೆ ಅವಕಾಶ ನೀಡುತ್ತಿಲ್ಲ. ಅವರನ್ನು ಬಂಧಿಸಲಾಗುತ್ತಿದೆ, ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಕಾಶ್ಮೀರದಲ್ಲಿ ನೆಲೆಸಿರುವ ಜನರಿಗೆ ಭದ್ರತೆ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಎಪಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪಾಖಿಸ್ತಾನದ ವಿರುದ್ಧ ಹರಿಹಾಯ್ದ ಅವರು, ಕಾಶ್ಮೀರ ಯಾವತ್ತಿಗೂ ಭಾರತದ ಅವಿಭಜಿತ ಬಾಗ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಪಾಕಿಸ್ತಾನ ತನ್ನ ಸಣ್ಣತನವನ್ನು ತೋರಿಸಬಾರದು ಎಂದು ಹೇಳಿದ್ದಾರೆ.
ಕೇಂದ್ರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ಮೇ 12 ರಂದು ಭಯೋತ್ಪಾದಕರ ಗುಂಡಿಗೆ ಬಲಿಯಾದ ರಾಹುಲ್ ಭಟ್ ಹತ್ಯೆಯ ನಂತರ ಕಾಶ್ಮೀರಿ ಪಂಡಿತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಾದ ನಂತರ ಕೆಲವೇ ದಿನಗಳಲ್ಲಿ 3 ಹತ್ಯೆಗಳು ನಡೆದಿವೆ.