ಕೊಳಕು ರಾಜಕೀಯ ಎಂದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

ಸಿದ್ದಗಂಗಾ ಮಠದಲ್ಲಿ ಮಕ್ಕಳ ಮುಂದೆ ಭಾಷಣ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆಯನ್ನು ಕೊಳಕು ರಾಜಕೀಯ ಎಂದು ಟೀಕಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ

ಮುಖ್ಯಮಂತ್ರಿ ಯಡಿಯೂರಪ್ಪನವರು ಟ್ವೀಟ್ ಮಾಡಿ ಪವಿತ್ರ ಸಿದ್ದಗಂಗಾ ಮಠವನ್ನು ರಾಜಕೀಯಕ್ಕೆ ಎಳೆದ ಸಿದ್ದರಾಮಯ್ಯನವರು ತಮ್ಮ ಕ್ಷುಲ್ಲಕ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಜನರಿಗೆ ರಾಷ್ಟ್ರದ ಆಗುಹೋಗುಗಳ ಬಗ್ಗೆ ತಿಳಿಸುವುದು ಒಬ್ಬ ಪ್ರಧಾನಿಯ ಕರ್ತವ್ಯ.

ದೇಶದ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದಾಗ ಅಭಿವೃದ್ಧಿಯ ವಿಚಾರಗಳ ಕುರಿತು ಗಮನ ಸೆಳೆಯುವ ಬದಲು ವಿರೋಧ ಪಕ್ಷಗಳು ಹುರುಳಿಲ್ಲದ ಆರೋಪಗಳ ಮೂಲಕ ವೃಥಾ ಟೀಕೆಗಳನ್ನು ಮಾಡುತ್ತಿರುವುದು ಅವರ ವೈಚಾರಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿ ಕಾರಿದ್ದಾರೆ.

ಇನ್ನು ರಾಜ್ಯ ಬಿಜೆಪಿಯ ಅಧಿಕೃತ ಟ್ವಟ್ಟರ್ ಖಾತೆಯಲ್ಲಿಯೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಮೀನು ತಿಂದು ದೇವಸ್ಥಾನಕ್ಕೆ ಪ್ರವೇಶ ಮಾಡಿದ ಸಿದ್ದರಾಮಯ್ಯ ಈ ನೆಲದ ಸಂಸ್ಕøತಿ, ಪಾವಿತ್ರ್ಯತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಠ ಮಾಡುತ್ತಿರುವುದು ವಿಪರ್ಯಾಸ ಎಂದು ಟೀಕೆ ಮಾಡಲಾಗಿದೆ.

ಆದರೆ, ಸಿದ್ದರಾಮಯ್ಯನವರು ಮಾಡಿದ ಟೀಕೆಯನ್ನು ಅವರ ಪಕ್ಷ ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿದೆ. ಜಾತ್ಯಾತೀತವಾದಿಯಾಗಿ ತ್ರಿವಿಧ ದಾಸೋಹ ನಡೆಸುತ್ತಿರುವ ಶ್ರದ್ಧಾ ಕೇಂದ್ರ ಸಿದ್ದಗಂಗಾ ಮಠದಲ್ಲಿ ರಾಜಕೀಯ ಮಾತನಾಡಿರುವುದು ನಿಮ್ಮ ನೈತಿಕ ಅದಃಪತನಕ್ಕೆ ಸಾಕ್ಷಿ ಅಲ್ಲವೇ..? ಎಂದು ಪ್ರಶ್ನೆ ಮಾಡಲಾಗಿದೆ.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಿರಾಕರಿಸಿ, ಮಠವನ್ನು ಪ್ರಚಾರಕ್ಕೆ ಬಳಸಿಕೊಂಡ ನೀವು ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ.

LEAVE A REPLY

Please enter your comment!
Please enter your name here