ADVERTISEMENT
ಅಕ್ಷಯ್ ಕುಮಾರ್ ಯು, ಮುಖ್ಯ ಸಂಪಾದಕರು, ಪ್ರತಿಕ್ಷಣ
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಇವತ್ತಿಗೆ ಒಂದು ತಿಂಗಳು. ಒಂದು ತಿಂಗಳಾದರೂ ಇನ್ನೂ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ.
ಮೇ 13ರಂದು ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ 135 ಸೀಟು ಮತ್ತು ಬಿಜೆಪಿ ಕೇವಲ 65 ಸೀಟುಗಳನ್ನು ಗೆದ್ದುಕೊಂಡಿತ್ತು.
ಒಂದೂ ತಿಂಗಳಾದರೂ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿಯನ್ನು ಮುನ್ನಡೆಸುವ ನಾಯಕ ಯಾರೂ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಸಚಿವ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಹೆಸರು ಚರ್ಚೆಯಲ್ಲಿದೆ.
ಮೂರೇ ದಿನದಲ್ಲಿ ಎಂದಿದ್ದ ಸಚಿವ ಜೋಶಿ:
ಈಗಾಗಲೇ ವಿರೋಧ ಪಕ್ಷದ ನಾಯಕನನ್ನು ನೇಮಿಸಿರಬೇಕು, ಆದರೆ ನಮ್ಮ ನಾಯಕರು ಒಡಿಶಾ ರೈಲು ಅಪಘಾತದ ಮೇಲೆ ಕೇಂದ್ರೀಕರಿಸಿದ್ದಾರೆ. ಮೂರು ದಿನಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲಾಗುವುದು
ಎಂದು ಜೂನ್ 6ರಂದು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದರು.
ಆದರೆ 2019ರಿಂದ 2023ರ ಮಾರ್ಚ್ವರೆಗೆ ಆಡಳಿತ ನಡೆಸಿದ ಬಿಜೆಪಿಗೆ ವಿಧಾನಸಭೆ ಮುಗಿದ ಬೆನ್ನಲ್ಲೇ ತನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು ಆಡಳಿತ ಪಕ್ಷ ಕಾಂಗ್ರೆಸ್ಗೆ ಕುಹುಕಕ್ಕೆ ವಸ್ತುವಾಗಿದೆ.
ವಿರೋಧ ಪಕ್ಷದ ನಾಯಕನ ಮಹತ್ವ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ಮುಖ್ಯಮಂತ್ರಿಯ ನೆರಳು ಎಂದೇ ಕರೆಯಲಾಗುತ್ತದೆ. ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ನೇತೃತ್ವದ ಸರ್ಕಾರದ ಸರಿ ತಪ್ಪುಗಳ ಮೇಲೆ ಕಣ್ಣಿಟ್ಟು ಚಾಟಿ ಬೀಸುವುದು ವಿಪಕ್ಷ ನಾಯಕನ ಜವಾಬ್ದಾರಿ.
ಬಲಿಷ್ಠ ಹೈಕಮಾಂಡ್ಗೆ ಆತಂಕ:
ಮೋದಿ ಅಲೆ ನಂಬಿಕೊಂಡು ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿಗೆ ಈಗ ಯಾರನ್ನು ವಿಪಕ್ಷ ನಾಯಕನನ್ನಾಗಿ ಮಾಡಿದರೆ ಒಳ್ಳೆದು ಎಂಬ ಆತಂಕ.
ಕರ್ನಾಟಕದಲ್ಲಿ ಬಲಿಷ್ಠ ಕಾಂಗ್ರೆಸ್ ಸರ್ಕಾರವನ್ನು ಎದುರಿಸುವ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾತಿ ಸಮೀಕರಣ ಸರಿ ಹೊಂದುವ ನಾಯಕನಿಗೆ ಮಣೆ ಹಾಕಲೇಬೇಕಾದ ಅನಿವಾರ್ಯತೆಯಲ್ಲಿದೆ ಬಿಜೆಪಿ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಂತ ಬಲಿಷ್ಠ ದೆಹಲಿ ನಾಯಕರಿದ್ದರೂ ಕರ್ನಾಟಕದಲ್ಲಿ ಬಿಜೆಪಿಗೆ ತನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದೇ ವಿಪರ್ಯಾಸ.
ವಿಧಾನಸಭೆಯ ಸ್ಪೀಕರ್ ಆಗಿ ಯು ಟಿ ಖಾದರ್ ಅವರು ಅಧಿಕಾರ ಸ್ವೀಕರಿಸಿದ ದಿನ ಸಂಪ್ರದಾಯದಂತೆ ಸಭಾ ನಾಯಕರಾಗಿರುವ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವಿರೋಧ ಪಕ್ಷದ ನಾಯಕನ ರೂಪದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೊಸ ಸ್ಪೀಕರ್ ಅವರನ್ನು ಗೌರವಪೂರ್ವಕವಾಗಿ ಪೀಠಕ್ಕೆ ಕರೆದುಕೊಂಡು ಬಂದಿದ್ದರು.
ಒಂದು ತಿಂಗಳೊಳಗೆ ಕಾಂಗ್ರೆಸ್ ಮೊದಲ ಗ್ಯಾರಂಟಿ ಜಾರಿ:
ಒಂದು ಕಡೆ ವಿಧಾನಸಭೆಯಲ್ಲಿ ತಮ್ಮ ನಾಯಕ ಯಾರು..? ಸಿಎಂ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆಯುವ ನಾಯಕ ಯಾರು..? ಎಂಬುದನ್ನೇ ನಿರ್ಧರಿಸಲು ಬಿಜೆಪಿ ತಿಣುಕಾಡುತ್ತಿರುವ ಹೊತ್ತಲ್ಲೇ ಇತ್ತ ಕಾಂಗ್ರೆಸ್ ಸರ್ಕಾರ ಫಲಿತಾಂಶ ಬಂದ 1 ತಿಂಗಳೊಳಗೆ ತನ್ನ ಮೊದಲ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ.
ಜೂನ್ 11ರಿಂದ ಕರ್ನಾಟಕದಲ್ಲಿ ಮಹಿಳೆಯರ ಉಚಿತ ಪ್ರಯಾಣದ ಗ್ಯಾರಂಟಿ ಯೋಜನೆ ಜಾರಿಯಾಗಿದೆ.
14 ದಿನದಲ್ಲೇ ಕಾಂಗ್ರೆಸ್ನ ಪೂರ್ಣ ಸರ್ಕಾರ ಅಸ್ತಿತ್ವಕ್ಕೆ:
ಫಲಿತಾಂಶ ಪ್ರಕಟವಾದ ಏಳೇ ದಿನಕ್ಕೆ ಅಂದರೆ ಮೇ 20ರಂದು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂತು. ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಮತ್ತು ಸಚಿವರಾಗಿ 8 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು.
ಮೇ 27ರಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ಸಚಿವರಾಗಿ 24 ಮಂದಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಫಲಿತಾಂಶ ಬಂದ 13 ದಿನದಲ್ಲೇ ಸಿದ್ದರಾಮಯ್ಯ ಅವರ ಸರ್ಕಾರ ಪೂರ್ಣ ಪ್ರಮಾಣದೊಂದಿಗೆ ಅಸ್ತಿತ್ವಕ್ಕೆ ಬಂತು.
ಜೂನ್ 8ರಂದು ಸಿದ್ದರಾಮಯ್ಯ ಅವರು 31 ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಿಸಿದರು.
ಆದರೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ 22 ತಿಂಗಳ ಅವಧಿಯಲ್ಲಿ ಪೂರ್ಣ ಸಂಪುಟವೇ ಇರಲಿಲ್ಲ. ಚುನಾವಣೆಯಲ್ಲಿ ಸೋತು ರಾಜೀನಾಮೆ ಕೊಡುವ ವೇಳೆಗೆ 6 ಸಚಿವ ಸ್ಥಾನಗಳು ಖಾಲಿ ಇದ್ದವು. ಇವುಗಳಲ್ಲಿ 4 ಸಚಿವ ಸ್ಥಾನ 22 ತಿಂಗಳೂ ಖಾಲಿ ಇದ್ದವು.
ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಯಾವ ಜಿಲ್ಲೆಗೂ ಅಧಿಕೃತವಾಗಿ ಸರ್ಕಾರ ಉಸ್ತುವಾರಿ ಸಚಿವರನ್ನು ನೇಮಿಸಿಯೇ ಇರಲಿಲ್ಲ. ಕೋವಿಡ್ ನಿರ್ವಹಣೆಗಾಗಿ ನೇಮಕಗೊಂಡ ಸಚಿವರೇ ಉಸ್ತುವಾರಿ ಸಚಿವರಂತೆ ಮುಂದುವರೆದರು.
ಮೇ 22ರಂದು ಹೊಸ ಶಾಸಕರ ಪ್ರಮಾಣವಚನ:
ಮೇ 22ರಿಂದ 24ರವರೆಗೆ ವಿಧಾನಸಭೆಯಲ್ಲಿ ಹೊಸ ಶಾಸಕರ ಪ್ರಮಾಣವಚನ ನಡೆದಿತ್ತು. ಆಗಲೂ ಬಿಜೆಪಿಗೆ ವಿಧಾನಸಭೆಯಲ್ಲಿ ನಾಯಕ ಇರಲಿಲ್ಲ.
ಇವತ್ತೇ ವಿಧಾನಪರಿಷತ್ ಉಪ ಚುನಾವಣೆಗೆ ಅಧಿಸೂಚನೆ ಪ್ರಕಟ:
ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿ ಪಕ್ಷದ ಮೂವರು ಎಂಎಲ್ಸಿಗಳು ರಾಜೀನಾಮೆ ಕೊಟ್ಟಿದ್ದರಿಂದ ಖಾಲಿಯಾಗಿದ್ದ ಪರಿಷತ್ ಉಪ ಚುನಾವಣೆಗೆ ಇವತ್ತೇ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜೂನ್ 6ರಂದು ಚುನಾವಣಾ ದಿನಾಂಕ ಪ್ರಕಟವಾಗಿತ್ತು.
ಇಷ್ಟಾದರೂ ಇನ್ನೂ ಬಿಜೆಪಿಗೆ ತನ್ನ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
13 ದಿನದಲ್ಲಿ ಜೆಡಿಎಸ್ ನಾಯಕನ ಆಯ್ಕೆ:
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮೇ 24ರಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಯ್ಕೆ ಆದರು.
ಚುನಾವಣಾ ಸೋಲಿಗೆ ಜೆಡಿಎಸ್ನಲ್ಲಿ ರಾಜೀನಾಮೆ:
ಇದರ ಜೊತೆಗೆ ಹೀನಾಯ ಸೋಲಿನ ಹೊಣೆಗಾರಿಕೆಯನ್ನು ಹೊತ್ತು ಜೆಡಿಎಸ್ ರಾಜಾಧ್ಯಕ್ಷ ಸ್ಥಾನಕ್ಕೆ ಸಿ ಎಂ ಇಬ್ರಾಹಿಂ ಮತ್ತು ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ ಯಾವಾಗ..?
ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತರೂ ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವರೇ ಮುಂದುವರೆದಿದ್ದಾರೆ. ಫಲಿತಾಂಶದ ಬಳಿಕ ಅಧ್ಯಕ್ಷರ ರಾಜೀನಾಮೆ ಯಾವಾಗ ಎಂದು ಹಲವು ಬಿಜೆಪಿ ಕಾರ್ಯಕರ್ತರೇ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದರು.
ADVERTISEMENT