ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿಮೃತಪಟ್ಟ ಪ್ರಯಾಣಿಕರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆ ವಕ್ತಾರ ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ. ಬಿಕಾನೇರ್-ಗುವಾಹಟಿ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ನಿನ್ನೆ ಜಲ್ಪೈಗುರಿ ಜಿಲ್ಲೆಯ ದೊಮೊಹಾನಿ ಬಳಿ ಹಳಿತಪ್ಪಿ ಮಗುಚಿ ಬಿದ್ದವು. ದುರ್ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ 36 ಕ್ಕೆ ಏರಿಕೆಯಾಗಿದೆ ಎಂದು ಈಶಾನ್ಯ ವಲಯ ರೈಲ್ವೆ ಮುಖ್ಯ ಸಾರ್ವಜನಿಕ ವಲಯ ಸಂಪರ್ಕಾಧಿಕಾರಿ ಗುನೀತ್ ಕೌರ್ ಹೇಳಿದ್ದಾರೆ.
ಜಲ್ಪೈಗುರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 23 ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದರೆ, ಆರು ಮಂದಿ ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿಗೆ ಮತ್ತು ಏಳು ಮಂದಿ ಮೇನಗುರಿ ಗ್ರಾಮೀಣ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸ್ಥಳಕ್ಕೆ ರೈಲ್ವೆ ಸಚಿವರ ಭೇಟಿ: ದುರ್ಘಟನೆ ನಡೆದ ಸ್ಥಳಕ್ಕೆ ಇಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈಶಾನ್ಯ ವಲಯ ಪ್ರಧಾನ ವ್ಯವಸ್ಥಾಪಕ ಅನ್ಶುಲ್ ಗುಪ್ತಾ ಇಂದು ಮಧ್ಯರಾತ್ರಿ 12.08 ಗಂಟೆಗೆ ಸ್ಥಳಕ್ಕೆ ತಲುಪಿ ರೈಲು ಸಂಚಾರವನ್ನು ಸಾಮಾನ್ಯಗೊಳಿಸಲು ಹಳಿಗಳ ಮರುಸ್ಥಾಪನೆ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಪ್ರಯಾಣಿಕರ ಪರಿಹಾರ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಗುನೀತ್ ಕೌರ್ ಹೇಳಿದ್ದಾರೆ.