ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ.
ಇತ್ತ ಯಡಿಯೂರಪ್ಪ ಅವರು ಕರ್ನಾಟಕ ಹೈಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು ಆ ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.
ಒಂದು ವೇಳೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಆಗ ಯಡಿಯೂರಪ್ಪ ಬಂಧನವಾಗಲ್ಲ, ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದರೆ ಸಿಐಡಿ ಪೊಲೀಸರು ಬಿಎಸ್ವೈ ಅವರನ್ನು ಬಂಧಿಸುವುದು ಅನಿವಾರ್ಯವಾಗಲಿದೆ.
ಜೂನ್ 17ರಂದು ವಿಚಾರಣೆಗೆ ಹಾಜರಾಗಲು ಸಿಐಡಿ ಬಳಿ ಸಮಯ ಕೇಳಲಾಗಿದೆ ಎಂಬ ಪ್ರಮುಖ ಅಂಶವನ್ನು ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಮೇಲ್ನೋಟಕ್ಕಾದರೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಾಬೀತುಪಡಿಸುವ ಸಾಕ್ಷ್ಯಗಳು ಇಲ್ಲ, ಬಿಎಸ್ವೈ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಅಂಶವೇ ದೂರಿನಲ್ಲಿ ಇಲ್ಲ, ದೂರುದಾರೆಯೂ ಸುಳ್ಳು ಕೇಸ್ ದಾಖಲಿಸುವ ಚಾಳಿ ಹೊಂದಿದ್ದು ಬೇರೆಬೇರೆಯವರ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ವಂಚನೆಯಂತ 53 ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂಬ ಅಂಶವನ್ನು ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
ಫೆಬ್ರವರಿ 2ರಂದು ಪ್ರಕರಣ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದರೂ ಆ ಬಳಿಕ ಮಾರ್ಚ್ 14ರವರೆಗೆ ನನ್ನ ಮನೆಗೆ ದೂರುದಾರೆ ಎರಡು ಬಾರಿ ಭೇಟಿ ನೀಡಿದ್ದಾಳೆ ಎಂಬ ಅಂಶವನ್ನೂ ಯಡಿಯೂರಪ್ಪ ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಜೊತೆಗೆ ತಮಗೆ 81 ವರ್ಷ ವಯಸ್ಸಾಗಿದ್ದು, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಆಗಾಗ್ಗೆ ವೈದ್ಯಕೀಯ ಪರೀಕ್ಷೆ ಮತ್ತು ವೈದ್ಯರ ಸಲಹೆ-ಸೂಚನೆ ಅಗತ್ಯವಿರುವುದರಿಂದ ಕಸ್ಟಡಿಯಲ್ಲಿ ಇಡುವ ಅಗತ್ಯವಿಲ್ಲ ಎಂಬ ಅಂಶವನ್ನೂ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ADVERTISEMENT
ADVERTISEMENT