ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟಕ್ಕೆ 10 ದಿನದ ಅಂತರದಲ್ಲಿ ಎರಡನೇ ಬಾರಿ ಮುಖಭಂಗವಾಗಿದ್ದು, ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಮತ್ತು ಮಹಾಮೈತ್ರಿ ಕೂಟ ಐದು ಸ್ಥಾನಗಳನ್ನು ಗೆದ್ದಿದೆ.
ಬಿಜೆಪಿ ತಾನು ಕಣಕ್ಕಿಳಿಸಿದ ಐವರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದೆ. ಶಿವಸೇನೆ ಮತ್ತು ಎನ್ಸಿಪಿಯ ತಲಾ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ ಒಬ್ಬ ಅಭ್ಯರ್ಥಿ ಮಾತ್ರ ಗೆದ್ದಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಆರನೇ ಸ್ಥಾನವನ್ನು ಶಿವಸೇನೆಯ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿ ಗೆದ್ದುಕೊಂಡಿತ್ತು. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿ ಗೆದ್ದಿದೆ.
ಈ ಮೂಲಕ ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟ ಸರ್ಕಾರ ಬೀಳಬಹುದು ಎಂಬ ಗುಮಾನಿಗಳಿಗೆ ಮತ್ತೆ ರೆಕ್ಕೆಪುಕ್ಕ ಸಿಕ್ಕಿದೆ.
285 ಸದಸ್ಯ ಬಲದ ವಿಧಾನಸಭೆಯಲ್ಲಿ 285 ಮಂದಿ ಮತದಾನ ಮಾಡಿದ್ದರು. ಶಿವಸೇನೆಯ ಓರ್ವ ಶಾಸಕ ಕಳೆದ ತಿಂಗಳು ನಿಧನರಾಗಿದ್ದರು ಮತ್ತು ಜೈಲಿನಲ್ಲಿರುವ ನವಾಬ್ ಮಲ್ಲಿಕ್ ಮತ್ತು ಅನಿಲ್ ದೇಶ್ಮುಖ್ಗೆ ಮತದಾನಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿಲಿಲ್ಲ.
ಬಿಜೆಪಿ ಒಟ್ಟು 106 ಶಾಸಕರನ್ನು ಹೊಂದಿದೆ. ಮಹಾಮೈತ್ರಿ ಕೂಟ 150 ಶಾಸಕರನ್ನು (ಶಿವಸೇನೆ 55, ಎನ್ಸಿಪಿ 51, ಕಾಂಗ್ರೆಸ್ 44) ಹೊಂದಿದೆ. ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಶಾಸಕರು ಒಟ್ಟು 29 ಮಂದಿ ಇದ್ದಾರೆ.
ಶಿವಸೇನೆಗೆ ತನ್ನ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪೂರ್ಣ ಪ್ರಮಾಣದ ಬಹುಮತ ಇತ್ತು. ಎನ್ಸಿಪಿಗೆ ಒಬ್ಬ ಹೆಚ್ಚುವರಿ ಶಾಸಕರ ಬೆಂಬಲದ ಅಗತ್ಯ ಇತ್ತು. ಕಾಂಗ್ರೆಸ್ಗೆ ತನ್ನ ಎರಡನೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು 8 ಮತಗಳ ಕೊರತೆ ಇತ್ತು.