BIG EXCLUSIVE : ಜೂನ್‌ 1ರಿಂದ ಸಾಲ ಕಟ್ಟುವ ರೈತರಿಗೆ ಶೂನ್ಯ ಬಡ್ಡಿ ರಿಯಾಯ್ತಿ ಸಿಗಲ್ಲ..!

ಲಾಕ್‌ಡೌನ್‌ ಹೊತ್ತಲ್ಲಿ ಕಂಗೆಟ್ಟಿರುವ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದ ಕಾರಣದಿಂದ ರಾಜ್ಯ ಸರ್ಕಾರ ಆಘಾತ ನೀಡಿದ್ದು, ಬೆಳೆಸಾಲದ ಮೇಲಿನ ಶೂನ್ಯ ಬಡ್ಡಿ ಲಾಭವನ್ನು ಪಡೆಯಲು ಮೇ 31ರೊಳಗೆ ಬೆಳೆ ಸಾಲ ಪಾವತಿಸುವಂತೆ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಲಾಕ್‌ಡೌನ್‌ನಿಂದಾಗಿ ಖರೀದಿ ಇಲ್ಲದೇ ಹೊಲ-ಜಮೀನುಗಳಲ್ಲಿ ಬೆಳೆ ನಾಶ ಆಗಿ ಕಂಗೆಟ್ಟಿರುವ ರೈತರ ಗಾಯದ ಮೇಲೆ ಕೇಂದ್ರ ಸರ್ಕಾರದ ಕಾರಣದಿಂದ ರಾಜ್ಯ ಸರ್ಕಾರ ಬರೆ ಎಳೆದಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೂರು ತಿಂಗಳವರೆಗೆ ಸಾಲ ಕಟ್ಟುವಿಕೆಯಿಂದ ರೈತರಿಗೆ ವಿನಾಯ್ತಿ ನೀಡುವಂತೆ ಆರ್‌ಬಿಐ ಎಲ್ಲಾ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳಿಗೆ ಸಲಹೆ ನೀಡಿತ್ತು. ಇದಾದ ಬಳಿಕ ಕೇಂದ್ರ ಕೃಷಿ ಸಚಿವಾಲಯದ ಸೂಚನೆಯ ಮೇರೆಗೆ ನಬಾರ್ಡ್‌ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌) ಬೆಳೆಸಾಲದಲ್ಲಿ ಬ್ಯಾಂಕುಗಳಿಗೆ ಶೇಕಡಾ 2ರಷ್ಟು ಬಡ್ಡಿ ರಿಯಾಯ್ತಿ ಮತ್ತು ಅವಧಿಯೊಳಗೆ ಸಾಲ ಪಾವತಿಸುವ ರೈತರಿಗೆ ಶೇಕಡಾ 3ರಷ್ಟು ಬಡ್ಡಿ ರಿಯಾಯ್ತಿ ನೀಡುವುದಾಗಿ ಮಾರ್ಚ್‌ 30ರಂದು ಆದೇಶ ಹೊರಡಿಸಿತ್ತು. 3 ಲಕ್ಷ ರೂಪಾಯಿವರೆಗೆ ಬೆಳೆ ಸಾಲ ಪಡೆದಿರುವ ರೈತರು ಮೇ 31ರೊಳಗೆ ಸಮಯಕ್ಕೆ ಸರಿಯಾಗಿ ಬೆಳೆ ಸಾಲ ಪಾವತಿಸಿದರೆ ಈ ಲಾಭ ಪಡೆದುಕೊಳ್ಳಬಹುದಾಗಿದೆ.

ವಿಶೇಷ ಎಂದರೆ ವಾರ್ಷಿಕ ಬೆಳೆಸಾಲದ (ಉದಾಹರಣೆಗೆ ಒಂದು ವೇಳೆ ಮಾರ್ಚ್‌ 2019ರಲ್ಲಿ ಶೂನ್ಯ ಬಡ್ಡಿ ದರ ಬೆಳೆ ಸಾಲ ಪಡೆದಿದ್ದರೆ ಆ ಸಾಲವನ್ನು 2020ರ ಮಾರ್ಚ್‌ರೊಳಗೆ ಪಾವತಿ ಮಾಡುವುದು) ಪಾವತಿಯ ಅವಧಿಯನ್ನು ರಾಜ್ಯ ಸರ್ಕಾರವು ಕೇಂದ್ರ ಕೃಷಿ ಸಚಿವಾಲಯ ಮೂರು ತಿಂಗಳವರೆಗೆ (ಮಾರ್ಚ್‌ನಿಂದ ಮೇ 31ರವರೆಗೆ) ಸಾಲ ಕಟ್ಟುವುದರಿಂದ ವಿನಾಯ್ತಿ ನೀಡುವುದಕ್ಕೂ ಮೊದಲೇ ಜೂನ್‌ 30ರವರೆಗೆ ವಿನಾಯ್ತಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಅಂದರೆ ಬೆಳೆ ಸಾಲ, ಮಧ್ಯಮಾವಧಿ ಮತ್ತು ಕೃಷಿ ಸಾಲ ಪಡೆದಿರುವ ರೈತರಿಗೆ ಸಾಲ ಪಾವತಿಯಿಂದ ಜೂನ್‌ 30ರವರೆಗೆ ವಿನಾಯಿತಿ ನೀಡಿತ್ತು ರಾಜ್ಯ ಸರ್ಕಾರ.

ಆದರೆ ಮಾರ್ಚ್‌ 30ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಮೇ 31ವರೆಗಷ್ಟೇ ಬಡ್ಡಿ ರಿಯಾಯ್ತಿಯ ಲಾಭವನ್ನು ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.

ಇದರಿಂದ ಹೊಸ ಧರ್ಮಸಂಕಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಈಗ ಮೇ 31ರೊಳಗೆ ಬೆಳೆ ಸಾಲ ವಸೂಲಿ ಮಾಡುವಂತೆ ಸಹಕಾರಿ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಅಂದರೆ ಈ ಹಿಂದೆ ರಾಜ್ಯ ಸರ್ಕಾರವೇ ನೀಡಿದ್ದ ಜೂನ್‌ 30ರ ಗುಡುವಿಗಿಂತ ಒಂದು ತಿಂಗಳೇ ಮೊದಲು.

ಒಂದು ವೇಳೆ ಮೇ 31ರೊಳಗೆ ಶೂನ್ಯ ಬಡ್ಡಿ ಬೆಳೆ ಸಾಲ ಪಾವತಿ ಆಗದೇ ಹೋದರೆ ಜೂನ್‌ 1ರಿಂದ ಶೂನ್ಯ ಬಡ್ಡಿ ಯೋಜನೆಯಡಿ ರಾಜ್ಯ ಸರ್ಕಾರ ಕೊಡುವ ಶೇಕಡಾ 7ರಷ್ಟು ಬಡ್ಡಿ ರಿಯಾಯ್ತಿ ಮತ್ತು ಕೇಂದ್ರ ಸರ್ಕಾರ ರೈತರು ಮತ್ತು ಬ್ಯಾಂಕುಗಳಿಗೆ ನೀಡುವ ಒಟ್ಟು ಶೇಕಡಾ 5ರಷ್ಟು ಬಡ್ಡಿ ರಿಯಾಯ್ತಿ ರೈತರಿಗೆ ಸಿಗಲ್ಲ. ಆಗ ರೈತರು ಒಟ್ಟು ಶೇಕಡಾ 12ರಷ್ಟು ಬಡ್ಡಿಯನ್ನು ಶೂನ್ಯ ಬಡ್ಡಿ ಮೇಲಿನ ಸಾಲಕ್ಕೂ ಕಟ್ಟಬೇಕಾಗುತ್ತದೆ.

ವಿಶೇಷ ಎಂದರೆ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಸರ್ಕಾರ ಲಾಕ್‌ಡೌನ್‌ ಹೊತ್ತಲ್ಲಿ ರೈತರಿಗೆ ನೀಡಿದ ನೆರವಿನ ಬಗ್ಗೆ ಹೇಳಿದ್ದರಲ್ಲಿ ಈ ಸಾಲ ಪಾವತಿಯ ಅವಧಿಯ ವಿಸ್ತರಣೆಯನ್ನೂ ಉಲ್ಲೇಖಿಸಿದ್ದರು. ಆದರೆ ಮೇ31ರ ಬಳಿಕ ಸಾಲ ಮರು ಪಾವತಿ ಮಾಡಿದರೆ ಬಡ್ಡಿ ರಿಯಾಯ್ತಿ ಸಿಗಲ್ಲ ಎಂದು ಸ್ವತಃ ಕೇಂದ್ರ ಕೃಷಿ ಸಚಿವಾಲಯವೇ ನೀಡಿದ್ದ ಆದೇಶ ಈಗ ರಾಜ್ಯ ಸರ್ಕಾರ, ಸಹಕಾರಿ ಸಂಘಗಳು ಮತ್ತು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

 

LEAVE A REPLY

Please enter your comment!
Please enter your name here