ಯಾವುದು ಆಗಬಾರದು ಅಂದುಕೊಂಡಿದ್ವೋ ಅದೇ ಆಗಿಬಿಟ್ಟಿದೆ. ವರ್ಷದ ಕೊನೆಯಲ್ಲಿ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಬ್ರಿಟನ್ ನಲ್ಲಿ ಪತ್ತೆಯಾದ ಹೊಸ ಬಗೆಯ ಕೊರೋನಾ ವೈರಸ್ ಇದೀಗ ಭಾರತಕ್ಕೆ ಕಾಲಿಟ್ಟಿದೆ. ಅದರಲ್ಲೂ ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣ ವರದಿ ಆಗಿವೆ.
ದೇಶದಲ್ಲಿ ಒಟ್ಟು ಆರು ಮಂದಿಯಲ್ಲಿ ಹೊಸ ಬಗೆಯ ಬ್ರಿಟನ್ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರಲ್ಲಿ ಮೂವರು ಬೆಂಗಳೂರಿನವರು ಎನ್ನುವುದು ಗಮನಿಸಬೇಕಾದ ವಿಚಾರ. ಹೈದರಾಬಾದ್ ನಲ್ಲಿ ಎರಡು ಪ್ರಕರಣಗಳು ವರದಿ ಅಗಿವೆ. ಪುಣೆಯಲ್ಲಿ ಒಂದು ಪ್ರಕರಣ ವರದಿ ಆಗಿದೆ ಎಂದು ಐಸಿಎಂಅರ್ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ನವೆಂಬರ್ 25ರಿಂದ ಡಿಸೆಂಬರ್ 23ರ ಅವಧಿಯಲ್ಲಿ ಬ್ರಿಟನ್ ದೇಶದಿಂದ ಭಾರತಕ್ಕೆ ವಿವಿಧ ವಿಮಾನ ನಿಲ್ದಾಣಗಳ ಮೂಲಕ ಒಟ್ಟು 33ಸಾವಿರ ಮಂದಿ ಬಂದಿದ್ದು, ಇವರ ಪೈಕಿ 114 ಮಂದಿಗೆ ಪಾಸಿಟೀವ್ ಬಂದಿತ್ತು.
114 ಮಂದಿ ಸ್ಪೈಕ್ ಜೀನ್ ನಡೆಸಿದಾಗ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಲ್ಯಾಬ್ ನಿಂದ ಮೂರು ಪ್ರಕರಣ, ಹೈದರಾಬಾದ್ ನ ಸಿಸಿಎಂಬಿಯಲ್ಲಿ ಎರಡು ಪ್ರಕರಣ, ಪುಣೆಯ ಎನ್ ಐವಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಒಂದು ಪ್ರಕರಣ ದೃಢಪಟ್ಟಿದೆ ಎಂದು ಐಸಿಎಂಅರ್ ತಿಳಿಸಿದೆ.
ಎಲ್ಲಾ ಬ್ರಿಟನ್ ಕೊರೋನಾ ಸೋಂಕಿತರನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.
ಹೊಸ ಬಗೆಯ ಸೋಂಕು ತಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.