BIG BREAKING: ಪೋಕ್ಸೋ ಕೇಸ್​ ಹಿಂಪಡೆಯುವಂತೆ ಬೆದರಿಕೆ, ಹಲ್ಲೆ ಆರೋಪ – ADGP ಅಲೋಕ್​ ಕುಮಾರ್​ ವಿರುದ್ಧ PCRಗೆ ಆದೇಶ

ಪೋಕ್ಸೋ (POCSO) ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಡಿ ADGP (ಕಾನೂನು ಸುವ್ಯವಸ್ಥೆ  Law and Order) ಅಲೋಕ್​ ಕುಮಾರ್ (Alok Kumar)​ ಅವರ ವಿರುದ್ಧ ಖಾಸಗಿ ದೂರು ದಾಖಲಿಸುವಂತೆ ಬೆಂಗಳೂರಿನ 39ನೇ ಎಸಿಎಎಂ ಕೋರ್ಟ್​​ ಆದೇಶಿಸಿದೆ (Bengaluru Court) ಎಂದು ಪ್ರಮುಖ ಇಂಗ್ಲೀಷ್​ ದೈನಿಕ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.
ಎಡಿಜಿಪಿ ಅಲೋಕ್​ ಕುಮಾರ್​ ವಿರುದ್ಧ IPC ಸೆಕ್ಸನ್​ 12-ಎ, 166-ಎ, 323, 325 ಮತ್ತು 506 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚಿಸಿದೆ.
ಖಾಸಗಿ ದೂರು ದಾಖಲಾದ ಬಳಿಕ ನ್ಯಾಯಾಲಯ ದೂರುದಾರ ಮಹಿಳೆಯ ಹೇಳಿಕೆಯನ್ನು ದಾಖಲಿಸಲಿದೆ.
ಎಡಿಜಿಪಿ ಅಲೋಕ್​ ಕುಮಾರ್​ ವಿರುದ್ಧ ಖಾಸಗಿ ದೂರು ದಾಖಲಿಸುವಂತೆ ಕೋರಿ ದೂರುದಾರೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ಮಾನ್ಯ ಮಾಡಿದೆ.
ಏನಿದು ಪ್ರಕರಣ:
2016ರಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ದೂರುದಾರ ಮಹಿಳೆ ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದರು. ಆ ದೂರನ್ನು ಹಿಂಪಡೆದು ನ್ಯಾಯಾಲಯದ ಹೊರಗೆ ರಾಜಿ ಮಾಡಿಕೊಳ್ಳುವಂತೆ ಸಿಸ್ಟರ್​ ಶಾಲಿನಿ ಎಂಬವರು ಒತ್ತಡ ಹೇರಿದ್ದರು ಮತ್ತು ಬೆದರಿಕೆ ಹಾಕಿದ್ದರು.
ಈ ಸಂಬಂಧ ಫೆಬ್ರವರಿ 11, 2019ರಂದು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್​ ಆಯುಕ್ತರಾಗಿದ್ದ ಅಲೋಕ್​ ಕುಮಾರ್​ ಕಚೇರಿಗೆ ಆ ದೂರುದಾರೆ ಮಹಿಳೆ ತೆರಳಿದ್ದರು. ಈ ವೇಳೆ ಅಲೋಕ್​ ಕುಮಾರ್​ ಅವರು ಕೇಸ್​ ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಲ್ಲದೇ ಮುಖದ ಮೇಲೆ ಗುದ್ದಿ ಹಲ್ಲೆಯನ್ನೂ ನಡೆಸಿದ್ದರು ಮತ್ತು ತಾನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಳಿಕ ಚಿಕಿತ್ಸೆ ಪಡೆದಿದ್ದಾಗಿ ಅಲೋಕ್​ ಕುಮಾರ್​ ವಿರುದ್ಧ ದೂರು ಆ ಮಹಿಳೆ ದೂರಿದ್ದರು.
ಈ ಘಟನೆ ಬಳಿಕ ದೂರುದಾರೆ ಮಹಿಳೆ ಪೊಲೀಸ್​ ಆಯುಕ್ತರಾಗಿದ್ದ ಸುನಿಲ್​ ಕುಮಾರ್​ ಮತ್ತು ಗೃಹ ಸಚಿವರನ್ನು ಭೇಟಿ ಆಗಿದ್ದರೂ ಪ್ರಯೋಜನ ಆಗಿರಲಿಲ್ಲ.
ಆದರೆ ಇದಾದ ಬಳಿಕ ಮಾರ್ಚ್​ 25, 2019ರಂದು ವಿಧಾನಸೌಧ ಠಾಣೆ ಪೊಲೀಸರು ಈ ದೂರುದಾರ ಮಹಿಳೆಯ ವಿರುದ್ಧವೇ ಎಡಿಜಿಪಿ ಅಲೋಕ್​ ಕುಮಾರ್​ ನೀಡಿದ್ದ ದೂರು ಆಧರಿಸಿ ಕಚೇರಿಯಲ್ಲಿ ಗಲಾಟೆ ಮಾಡಿದ್ದಾರೆ ಎಂಬ ಆರೋಪದಡಿ ಎಫ್​ಐಆರ್​ ದಾಖಲಿಸಿದ್ದರು.
ಈ ಎಫ್​ಐಆರ್​ ರದ್ದತಿ ಪ್ರಶ್ನಿಸಿ ಮಹಿಳೆ ಹೈಕೋರ್ಟ್​​ ಮೊರೆ ಹೋಗಿದ್ದರು. ವಿಧಾನಸೌಧದ ಪೊಲೀಸರು ದಾಖಲಿಸಿದ್ದ ಎಫ್​ಐಆರ್​ರನ್ನು ಕಾನೂನಿನ ದುರ್ಬಳಕೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್​ ಮಹಿಳೆ ವಿರುದ್ಧದ ಎಫ್​ಐಆರ್​ ರದ್ದುಪಡಿಸಿತ್ತು.

LEAVE A REPLY

Please enter your comment!
Please enter your name here