ರೈಲ್ವೆ ಸುರಕ್ಷತೆಗೆ ಭಾರತ ಕವಚ – ವಂದೇ ಭಾರತ್​ನಲ್ಲೂ ಇದೇ ತಂತ್ರಜ್ಞಾನ – ಹೇಗೆ ಕೆಲಸ ಮಾಡುತ್ತೆ..?

25 ವರ್ಷಗಳಲ್ಲೇ ಸಂಭವಿಸಿದ ಭೀಕರ ಅಪಘಾತದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 232ಕ್ಕೆ ಏರಿಕೆ ಆಗಿದೆ.
ಭೀಕರ ರೈಲು ಅಪಘಾತದ ಬೆನ್ನಲ್ಲೇ ರೈಲುಗಳ ನಡುವಿನ ಅಪಘಾತ ತಡೆಗೆ ಸುರಕ್ಷಾ ಕ್ರಮಗಳಿವೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಭಾರತ ಕವಚ- ಪರೀಕ್ಷಾರ್ಥ ಪ್ರಯೋಗ ಯಶಸ್ವಿ:
ಕಳೆದ ವರ್ಷ ಮಾರ್ಚ್​ನಲ್ಲಿ ರೈಲ್ವೆ ಸಚಿವಾಲಯವೇ ಕೊಟ್ಟ ಮಾಹಿತಿಯ ಪ್ರಕಾರ ಭಾರತ​ ಕವಚ​ ಹೆಸರಲ್ಲಿ ಸ್ವದೇಶಿ ತಂತ್ರಜ್ಞಾನವನ್ನೇ ಬಳಸಿ ರೈಲು ಅಪಘಾತ ತಡೆ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರಯೋಗಿಸಲಾಯಿತು.

ವಂದೇ ಭಾರತ್​ನಲ್ಲೂ ಇದೇ ತಂತ್ರಜ್ಞಾನ:

ವಂದೆ ಭಾರತ್ ರೈಲಿನಲ್ಲೂ ಕವಚ ತಂತ್ರಜ್ಞಾನವನ್ನೇ ಬಳಸಲಾಗಿದೆ. ಯುರೋಪಿಯನ್​ ತಂತ್ರಜ್ಞಾನಕ್ಕೆ ಸರಿಸಮಾನದ ತಂತ್ರಜ್ಞಾನ ಎಂದೇ ಕರೆಯಲಾಗಿದ್ದು, 10 ಸಾವಿರ ವರ್ಷಗಳಲ್ಲಿ 1 ದೋಷವಷ್ಟೇ ಕಾಣಿಸಿಕೊಳ್ಳಬಹುದು ಎನ್ನುವಷ್ಟರ ಮಟ್ಟಿಗೆ ಕವಚ ಕೆಲಸ ಮಾಡುತ್ತಿದೆ ಎಂದು ರೈಲ್ವೆ ಸಚಿವಾಲಯ ಹೇಳಿತ್ತು.

ಏನಿದು ಭಾರತ ಕವಚ..?
ಸ್ವಯಂಚಾಲಿತ ರೈಲು ಸುರಕ್ಷತೆ (Automatic Train Protection) ತಂತ್ರಜ್ಞಾನಕ್ಕೆ ಭಾರತ ಕವಚ ಎಂದು ನಾಮಕರಣ ಮಾಡಲಾಗಿತ್ತು. ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಘ ಇತರೆ ಮೂರು ಭಾರತೀಯ ಸಂಸ್ಥೆಗಳೊಂದಿಗೆ ಸೇರಿಕೊಂಡು ರಾಷ್ಟ್ರೀಯ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆ (National Automatic Train Protection (ATP)ಯನ್ನು ಅಳವಡಿಸಿಕೊಂಡು ಭಾರತ ಕವಚವನ್ನು ಅಭಿವೃದ್ಧಿಪಡಿಸಿತ್ತು.
ಈ ಮೂಲಕ ಸಂಚಾರ ಮಾಡುತ್ತಿರುವ ರೈಲುಗಳ ಸುರಕ್ಷತೆಯನ್ನು ಹೆಚ್ಚಿಸಿತ್ತು.

ಭಾರತ ಕವಚದ ಗುಣಲಕ್ಷಣಗಳು:
ಭಾರತ ಕವಚ ತಂತ್ರಜ್ಞಾನ ಅಪಘಾತ ತಡೆಗೆ ಲೋಕೋ ಪೈಲಟ್​ಗಳಿಗೆ ನೆರವು. ಸಿಗ್ನಲ್​ ದಾಟಿಹೋಗುವುದು ಮತ್ತು ಅತೀ ವೇಗದ ವೇಳೆ ಮಾತ್ರವಲ್ಲದೇ ದಟ್ಟ ಮಂಜು ಇತ್ಯಾದಿ ವಾತಾವರಣ ವೈಪರೀತ್ಯದ ವೇಳೆಯೂ ಲೋಕೋ ಪೈಲಟ್​ಗಳಿಗೆ ಸಹಕಾರಿ ಆಗುತ್ತದೆ. 
ಒಂದು ವೇಳೆ ಲೋಕೋ ಪೈಲಟ್​ ಬ್ರೇಕ್​ ಹಾಕಲು ವಿಫಲವಾದರೆ ಆಗ ಕವಚ ಸ್ವಯಂಚಾಲಿತವಾಗಿ ಬ್ರೇಕ್​ ಹಾಕಿ ರೈಲಿನ ವೇಗವನ್ನು ನಿಯಂತ್ರಿಸುತ್ತದೆ. 
ದಟ್ಟ ಮಂಜಿನ ವಾತಾವರಣ ಇದ್ದಾಗ ಹಳಿಗಳ ಬದಿ ಬಗ್ಗೆ ಸಿಗ್ನಲ್​ ನೀಡುವ ಮೂಲಕ ವೇಗದ ರೈಲುಗಳಿಗೆ ಸಹಕಾರಿ ಆಗುತ್ತದೆ.

ರೈಲಿನ ವೇಗದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡುತ್ತದೆ.
ಲೆವೆಲ್​ ಕ್ರಾಸಿಂಗ್​ನಲ್ಲಿ ಸ್ವಯಂಚಾಲಿತ ಎಚ್ಚರಿಕೆಯನ್ನು ನೀಡುತ್ತದೆ
ಒಂದು ರೈಲಿನ ಲೋಕೋ ಪೈಲಟ್​ ಇನ್ನೊಂದು ರೈಲಿನ ಲೋಕೋ ಪೈಲಟ್​ ಜೊತೆಗೆ ನೇರ ಸಂಪರ್ಕ ಮಾಡುವ ಮೂಲಕ ರೈಲು ಡಿಕ್ಕಿಯನ್ನು ತಪ್ಪಿಸುತ್ತದೆ.
ಒಂದು ವೇಳೆ ಹತ್ತಿರದಲ್ಲೇ ಎಲ್ಲಾದರೂ ಅವಘಢಗಳಾದರೆ ಆ ಬಗ್ಗೆ ಮಾಹಿತಿಯನ್ನು ರವಾನಿಸುತ್ತದೆ. 
ಭಾರತ ಕವಚ ತಂತ್ರಜ್ಞಾನವನ್ನು ಲಿಂಗಮಪಲ್ಲಿ-ವಿಕಾರಬಾದ್​-ವಾಡಿ, ವಿಕಾರಬಾದ್​-ಬೀದರ್​ (250 ಕಿಲೋ ಮೀಟರ್​ ದೂರ) ರೈಲಿನಲ್ಲಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿತ್ತು. ಇದಾದ ಬಳಿಕ ಈ ತಂತ್ರಜ್ಞಾನದ ಅಭಿವೃದ್ಧಿಗೆ ಒಪ್ಪಿಗೆ ನೀಡಲಾಗಿತ್ತು.
ಮನ್ಮಾಡ್​-ಮುದ್​ಖೇಡ್​-ಧೋಣ್​-ಗುಂಟ್ಕಲ್​ ಮತ್ತು ಬೀದರ್​-ಪರ್ಭಾನಿ ಮಾರ್ಗದಲ್ಲಿ 1,199 ಕಿಲೋ ಮೀಟರ್​ ದೂರಕ್ಕೆ ಭಾರತ ಕವಚ ಅಳವಡಿಕೆ ಕಾರ್ಯ ಜಾರಿಯಲ್ಲಿದೆ.
1,098 ಕಿಲೋ ಮೀಟರ್​ ದೂರದ ರೈಲ್ವೆ ಸಂಪರ್ಕವನ್ನು ಭಾರತ ಕವಚದೊಂದಿಗೆ ಜೋಡಿಸಲಾಗಿದೆ.
ಮುಂದಿನ ವರ್ಷದ ಮಾರ್ಚ್​ ವೇಳೆಗೆ ನವದೆಹಲಿ-ಹೌರಾ, ನವದೆಹಲಿ-ಮುಂಬೈ ಮಾರ್ಗವನ್ನೂ ಕವಚನೊಂದಿಗೆ ಜೋಡಿಸಲಾಗುತ್ತದೆ.
ಎಂದು ಮಾರ್ಚ್​ 28ರಂದು ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್​ ಅವರು ಲೋಕಸಭೆಗೆ ಲಿಖಿತ ಹೇಳಿಕೆ ಮೂಲಕ ಮಾಹಿತಿ ನೀಡಿದ್ದರು.