ಭಾರತ್ ಜೋಡೋ ಯಾತ್ರೆ ವೇಳೆ ಕೆಜಿಎಫ್ ಚಾಪ್ಟರ್-2 ಹಾಡನ್ನು ಬಳಸಿ ಕೃತಿಚೌರ್ಯ ಮಾಡಿದ್ದಾರೆ ಎಂಬ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದ ಜೈರಾಂ ರಮೇಶ್ ಮತ್ತು ಸುಪ್ರಿಯಾ ಶ್ರೀನಾಟೆ ಅವರು ಅರ್ಜಿ ಸಲ್ಲಿಸಿದ್ದರು.
ಕೃತಿಸ್ವಾಮ್ಯ ಉಲ್ಲಂಘನೆ ಆರೋಪದ ಅಡಿ ತಮ್ಮ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ವಜಾ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಕೃತಿಸ್ವಾಮ್ಯ ಕಾಯ್ದೆಯ ಕಲಂ 63ರಡಿಯಲ್ಲಿ ಒಂದು ವೇಳೆ ಆರೋಪಿತರು ತಿಳಿದು ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದರೆ ಅದು ಅಪರಾಧವಾಗುತ್ತದೆ. ಅಲ್ಲದೇ ಹಾಡಿನ ಬಳಕೆಯಲ್ಲಿ ಕೃತಿಚೌರ್ಯದ ಉದ್ದೇಶ ಇರಲಿಲ್ಲ. ಜೊತೆಗೆ ಆ ಹಾಡಿನ ಬಳಕೆಯಿಂದ ಯಾವುದೇ ಹಣಕಾಸಿನ ಲಾಭವನ್ನು ಪಡೆದುಕೊಳ್ಳಲಾಗಿಲ್ಲ ಎಂದು ಕಾಂಗ್ರೆಸ್ ನಾಯಕರ ಪರ ವಕೀಲರು ವಾದಿಸಿದ್ದರು.
ಆದರೆ ಎಂಆರ್ಟಿ ಮ್ಯೂಸಿಕ್ ಪರವಾಗಿ ವಾದಿಸಿದ ವಕೀಲರು ಒಂದು ವೇಳೆ ಹಾಡಿನ ಬಳಕೆಯಿಂದ ಅರ್ಜಿದಾರರು ಹಣಕಾಸಿನ ಲಾಭವನ್ನು ಗಳಿಸಿಲ್ಲ ಎಂದು ಭಾವಿಸಿದರೂ ಆ ಹಾಡಿನ ಬಳಕೆಯಿಂದ ಅವರಿಗೆ ಜನಪ್ರಿಯತೆ ಸಿಕ್ಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುವ ಸಲುವಾಗಿ ಕೆಜಿಎಫ್ ಹಾಡನ್ನು ಭಾರತ್ ಜೋಡೋ ಯಾತ್ರೆ ವೇಳೆ ಬಳಸಲಾಯಿತು ಎಂದು ಎಂಆರ್ಟಿ ಮ್ಯೂಸಿಕ್ ವಾದಿಸಿತ್ತು.
ADVERTISEMENT
ADVERTISEMENT