ಲಂಚ ಸ್ವೀಕರಿಸಲು ಹೋಗಿ ಕೇರಳದಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಇನ್ಸ್ಪೆಕ್ಟರ್ ಶಿವಪ್ರಕಾಶ್, ಮುಖ್ಯ ಕಾನ್ಸ್ಸ್ಟೇಬಲ್ ವಿಜಯ್ಕುಮಾರ್, ಶಿವಾನಿ, ಕಾನ್ಸ್ಸ್ಟೇಬಲ್ ಸಂದೇಶ್ ಅಮಾನತ್ತಾಗಿದ್ದಾರೆ. ಅಮಾನತ್ತಾದವರೆಲ್ಲರೂ ವೈಟ್ಫೀಲ್ಡ್ ಠಾಣೆಯವರು.
ಎಸಿಪಿ ವರದಿ ಆಧರಿಸಿ ನಾಲ್ವರನ್ನೂ ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಬಿ ಅವರು ಆದೇಶ ಹೊರಡಿಸಿದ್ದಾರೆ.
ಉದ್ಯೋಗ ಕೊಡಿಸುವ ನೆಪದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಚಂದಕ್ ಶ್ರೀಕಾಂತ್ ಎನ್ನುವವರಿಗೆ ಆನ್ಲೈನ್ ಮೂಲಕ 26 ಲಕ್ಷ ರೂಪಾಯಿ ವಂಚನೆ ಮಾಡಲಾಗಿತ್ತು.
ಈ ಸಂಬಂಧ ಜೂನ್ 14ರಂದು ವೈಟ್ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಇನ್ಸ್ಪೆಕ್ಟರ್ ಶಿವಪ್ರಕಾಶ್ ತಂಡ ಕೇರಳಕ್ಕೆ ತೆರಳಿ ಪರೇಶ್ ಮತ್ತು ನಿಶಾಂತ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿತ್ತು. ಇವರಿಬ್ಬರ ಮಾಹಿತಿ ಆಧರಿಸಿ ಸೋಮವಾರ ಎರ್ನಾಕುಲಂನಲ್ಲಿ ನಿಖಿಲ್ ಮತ್ತು ಅಖಿಲ್ನನ್ನು ಬಂಧಿಸಿತ್ತು.
ಆದರೆ ಬಂಧಿತ ಅಖಿಲ್ನ್ನು ಬಿಡುಗಡೆಗೊಳಿಸಲು ಇನ್ಸ್ಪೆಕ್ಟರ್ ಶಿವಪ್ರಕಾಶ್ ತಂಡ 3 .96 ಲಕ್ಷ ರೂಪಾಯಿ ಬೇಡಿಕೆ ಇಟ್ಟಿತ್ತು. ಲಂಚ ಬೇಡಿಕೆ ಸಂಬಂಧ ಅಖಿಲ್ ಪರ ವಕೀಲರು ಕೇರಳ ಪೊಲೀಸರಿಗೆ ದೂರು ನೀಡಿದ್ದರು.
ವೈಟ್ಫೀಲ್ಡ್ ಪೊಲೀಸರ ಕಾರಿನಲ್ಲಿ 3 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಉಳಿದ ಮೊತ್ತವನ್ನು ಸ್ವೀಕರಿಸುವ ವೇಳೆ ವೈಟ್ಫೀಲ್ಡ್ ಪೊಲೀಸರ ತಂಡ ಕೇರಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
ADVERTISEMENT
ADVERTISEMENT