Bengaluru: ಬೆಂಗಳೂರಲ್ಲಿ ಬಾಂಬ್​ ಸ್ಫೋಟ ತಪ್ಪಿಸಿದ ಪೊಲೀಸರ ಕಾರ್ಯಾಚರಣೆ – ಐವರು ಶಂಕಿತ ಉಗ್ರರು ಅರೆಸ್ಟ್​ – ಜೈಲಿನಲ್ಲೇ ಪಿತೂರಿ

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್​ ಸರ್ಕಾರ ಕೈಗೊಂಡ ಪ್ರಮುಖ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ರಾಜಧಾನಿ ಬೆಂಗಳೂರಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಐವರನ್ನು ಬಂಧಿಸಲಾಗಿದೆ.

ಈ ಮೂಲಕ ರಾಜಧಾನಿಯಲ್ಲಿ ಭಾರೀ ವಿಧ್ವಂಸಕ ಕೃತ್ಯವನ್ನು ಪೊಲೀಸರು ತಪ್ಪಿಸಿದ್ದಾರೆ.

ಸೈಯದ್​ ಸುಹೇಲ್​, ಉಮರ್​, ಜನೈದ್​, ಮುದಾಸಿರ್​ ಮತ್ತು ಜಹೀದ್​ನನ್ನು ಬೆಂಗಳೂರು ನಗರದ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಶಂಕಿತ ಉಗ್ರ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ದಯಾನಂದ್​ ಮಾಹಿತಿ ನೀಡಿದ್ದಾರೆ.

ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಈ ಐವರು ಶಂಕಿತ ಉಗ್ರರು ಬೆಂಗಳೂರಲ್ಲಿ ಬಾಂಬ್​ ಸ್ಫೋಟಕ್ಕೆ ಸಂಚು ಹೆಣೆದಿದ್ದರು.

2017ರಲ್ಲಿ ಆರ್​ ಟಿ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿಗಳಿಗೆ 2008ರ ಸರಣಿ ಬಾಂಬ್​ ಸ್ಫೋಟದ ಆರೋಪಿಯಾಗಿದ್ದ ಟಿ ನಜೀರ್​ನ್ನ ಸಂಪರ್ಕವಾಗಿತ್ತು. ಈತ ಈ ಐವರು ಆರೋಪಿಗಳಿಗೆ ಭಯೋತ್ಪಾದಕ ಕೃತ್ಯಕ್ಕೆ ಪ್ರಚೋದಿಸಿದ್ದ.

ಬಂಧಿತರಿಂದ 4 ವಾಕಿಟಾಕಿಗಳು, 7 ನಾಡ ಬಂದೂಕುಗಳನ್ನು, 42 ಜೀವಂತ ಗುಂಡುಗಳು, 2 ಡ್ರ್ಯಾಗರ್​ಗಳು, 2 ಸ್ಯಾಟ್​ಲೈಟ್​ ಫೋನ್​ಗಳು ಮತ್ತು 4 ಗ್ರೆನೇಡ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ವಿದೇಶಕ್ಕೆ ಓಡಿಹೋಗಿರುವ ಆರನೇ ಆರೋಪಿಯೇ ಬಾಂಬ್​ ಸ್ಫೋಟದ ಪಿತೂರಿ ಹೆಣೆದಿದ್ದ ಮತ್ತು ಆತನೇ ಈ ಐವರು ಆರೋಪಿಗಳಿಗೆ ಸಾಮಗ್ರಿಗಳನ್ನು ಪೂರೈಸಿದಿದ್ದ.

LEAVE A REPLY

Please enter your comment!
Please enter your name here