ಗ್ರಾಮೀಣಾಭಿವೃದ್ದಿ ಸಚಿವ ಕೆಎಸ್ ಈಶ್ವರಪ್ಪನವರ ವಿರುದ್ಧ 40 % ಲಂಚದ ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಉಡುಪಿ ಲಾಡ್ಜ್ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಮಾಸುವ ಮುನ್ನವೇ, ಚಿಕ್ಕಮಂಗಳೂರು ಜಿಲ್ಲೆಯ ಬಾಳೆಹೊನ್ನೂರು ನಗರದ ಲಾಡ್ಜ್ನಲ್ಲಿ ಮತ್ತೊಬ್ಬ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಳಗಾವಿ ಮೂಲದ ಬಸವರಾಜ್ (47) ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ. ಬಾಳೆಹೊನ್ನೂರಿನ ಲಾಡ್ಜ್ವೊಂದರಲ್ಲಿ 3 ದಿನಗಳ ಹಿಂದೆ ರೂಂ ಪಡೆದಿದ್ದ ಬಸವರಾಜ್ ಬುಧವಾರ ಬೆಳಿಗ್ಗೆ ರೂಂನಿಂದ ಹೊರಬಂದಿದ್ದರು. ಬೆಳಿಗ್ಗೆ ಮರಳಿ ರೂಂಗೆ ಹೋದ ಅವರು ರೂಂನಿಂದ ಹೊರಬಂದಿರಲಿಲ್ಲ.
ಇದರಿಂದ ಅನುಮಾನಗೊಂಡ ಲಾಡ್ಜ್ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ರೂಂ ಪರಿಶೀಲಿಸಿದಾಗ ಬಸವರಾಜ್ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಬಸವರಾಜ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈಗಾಗಲೇ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು ಅವರು ಬಂದ ಬಳಿಕ ಕಾರಣ ತಿಳಿದುಬರಬಹುದು ಎಂದು ಪೊಲೀಸರು ಆಶಿಸಿದ್ದಾರೆ.
ಬೆಳಗಾವಿಯ ಗುತ್ತಿಗೆದಾರ ಸಂತೊಷ್ ಪಾಟೀಲ್, ಸಚಿವ ಈಶ್ವರಪ್ಪನವರ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಳಿಕ; ವಿರೋಧ ಪಕ್ಷಗಳ ಒತ್ತಡದ ನಂತರ ಸಚಿವರು ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಬಸವರಾಜ್ ಅವರ ಸಾವಿನ ನಿಖರ ಕಾರಣ ಸದ್ಯಕ್ಕೆ ಹೊರ ಬಾರದೇ ಇದ್ದರೂ, ಸರ್ಕಾರದ ಮೇಲೆ ಮತ್ತಷ್ಟು ಒತ್ತಡವನ್ನು ತರಬಹುದು ಎಂದು ಹೇಳಲಾಗುತ್ತಿದೆ.