ಮುರುಘಾ ಮಠದ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿಯನ್ನು ನಟ ಪುನೀತ್ ರಾಜ್ಕುಮಾರ್ ಅವರಿಗೆ ಮಂಗಳವಾರ ಪ್ರಧಾನ ಮಾಡಲಾಯಿತು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು 2021ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಪಾರಿತೋಷಕ ಒಳಗೊಂಡಿದೆ.
ನಟ ಪುನೀತ್ ರಾಜ್ಕುಮಾರ್ ಕನ್ನಡದ ಕುವರ. ನಟನೆ ಮತ್ತು ವ್ಯಕ್ತಿತ್ವದ ಮೂಲಕ ಆಕಾಶದ ಎತ್ತರಕ್ಕೆ ಬೆಳೆದರು. ಅಭಿನಯ, ಹಾಡುಗಾರಿಕೆ, ಅಭಿವ್ಯಕ್ತಿಯಲ್ಲಿ ಪುನೀತ್ ಅವರನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ. ರಾಜ್ ಕುಟುಂಬ ಇಡೀ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದೆ. ಈ ಮೂಲಕ ಕುಟುಂಬ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಪುನೀತ್ ಕುರಿತು ಸಾಹಿತಿ ರಾಜಪ್ಪ ದಳವಾಯಿ ಮಾತನಾಡಿದರು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೃಷಿ ಸಚಿವ ಬಿ.ಸಿ.ಪಾಟೀಲ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ನಿರ್ಮಾಪಕ ಚಿನ್ನೇಗೌಡ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮತ್ತಿತರರು ಈ ಕಾರ್ಯಕ್ರಮದಲ್ಲಿದ್ದರು.