ವಿಧಾನ ಪರಿಷತ್ ಸಭಾಪತಿ ಸ್ಥಾನ ಹಾಗೂ ತಮ್ಮ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಇಂದು ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದರು. ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ ಹೊರಟ್ಟಿ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣಿಕ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇನೆ. ಕಲುಷಿತವಾದ ರಾಜಕಾರಣದಲ್ಲಿ ನಮ್ಮಂತವರಿಗೆ ನೋವು ಆಗಿದೆ. ಆದರೆ ಮನಸ್ಸು ಇಲ್ಲದೆ ಇದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತೆ ಎಂದರು.ಬಿಜೆಪಿ ಸೇರ್ಪಡೆ ಸಂಬಂಧಿಸಿದಂತೆ ಯಾವುದೇ ಷರತ್ತು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ರಾಜಕೀಯ ನಿಲುವಿನ ಬಗ್ಗೆ ಆಕ್ಷೇಪ ಇಲ್ಲ. ನನಗೆ ಎಲ್ಲ ಪಕ್ಷದವರು ಸಹಕಾರ ಕೊಟ್ಟಿದ್ದಾರೆ. 1980 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜಕೀಯ ಪ್ರವೇಶ ಮಾಡಿದೆ. 1986 ಜನತಾದಳ, ಲೋಕ ಶಕ್ತಿಯಲ್ಲಿ ಇದ್ದೆ. 2000 ದಿಂದ ಇಲ್ಲಿಯವರೆಗೆ ಜೆಡಿಎಸ್ನಲ್ಲಿ ಇದ್ದೆ. ಜೆಡಿಎಸ್ ನಲ್ಲಿ ಕುಟುಂಬ ಸದಸ್ಯರ ತರ ನೋಡಿಕೊಂಡರು ಎಂದರು.
ದೇವೇಗೌಡರ ಮೇಲೆ ಆಗಲಿ ಕುಮಾರಸ್ವಾಮಿ ಮೇಲೆ ಆಗಲಿ ಬೇಸರ ಇಲ್ಲ. ಆದರೆ, ದೇವೇಗೌಡರನ್ನು ಭೇಟಿ ಮಾಡಿ ಮಾತನಾಡುವ ಧೈರ್ಯ ಇಲ್ಲ. ಹಾಗಾಗಿ ಹತ್ತು ಪುಟಗಳ ಒಂದು ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿರುವ ಬಸವರಾಜ ಹೊರಟ್ಟಿ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಬಸವರಾಜ ಹೊರಟ್ಟಿ ಅವರ ಬಿಜೆಪಿ ಸೇರ್ಪಡೆಯಿಂದ ಧಾರವಾಡ ಬಿಜೆಪಿಯಲ್ಲಿ ಭಿನ್ನಮತ ಬುಗಿಲೆದ್ದಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಮೋಹನ್ ಲಿಂಬಿಕಾಯಿ ಬಹಿರಂಗವಾಗಿಯೇ ಹೊರಟ್ಟಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿ, ಬಿಜೆಪಿ ನಾಯಕರ ಮೇಲೆಯೂ ಅಸಮಾಧಾನ ಹೊರಹಾಕಿದ್ದರು.