ಸಭಾಪತಿ ಬಸವರಾಜ ಹೊರಟ್ಟಿಯವರು ಮೇಲ್ಮನೆ ಗೌರವ ಕಾಪಾಡಿಲ್ಲ ಸಭಾಪತಿಯಾಗಿ ಬಿಜೆಪಿ ಪಕ್ಷ ಸೇರ್ತೀನಿ ಅನ್ನೋದು ಮಹಾ ಅಪರಾಧ, ತಕ್ಷಣವೇ ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡಲಿ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಒತ್ತಾಯಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಕೆ ಹರಿಪ್ರಸಾದ್, ಸಭಾಪತಿಯಾಗಿ ಹೊರಟ್ಟಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸಭಾಪತಿಯಾಗಿ ಈರೀತಿ ಮಾಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರದ ಗೃಹ ಸಚಿವರೇ ಬಂದು ಹೊರಟ್ಟಿಯವರನ್ನು ಭೇಟಿ ಮಾಡಬೇಕಿತ್ತು. ಇದು ಸಭಾಪತಿಗೆ ಇರುವ ಸಂವಿಧಾನಬದ್ಧ ಅಧಿಕಾರ ಆದ್ರೆ ಹೊರಟ್ಟಿಯವ್ರು ತಾವೇ ಹೋಗಿ ಅಮಿತ್ ಶಾ ಭೇಟಿ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.
ಹೊರಟ್ಟಿಯವ್ರು ಯಾವುದೇ ಪಕ್ಷ ಸೇರಲಿ, ನಮಗೆ ಆಕ್ಷೇಪ ಇಲ್ಲ. ಆದ್ರೆ ಅವರು ತಮ್ಮ ರಾಜೀನಾಮೆ ಕೊಡೋ ಮುನ್ನ ಈ ನಡೆ ಸರಿಯಲ್ಲ. ಸಭಾಪತಿ ಹೊರಟ್ಟಿಯವರ ನಡೆ ಪಕ್ಷಾಂತರ ನಿಷೇಧ ಕಾಯ್ದೆಯೊಳಗೆ ಬರುತ್ತದೆ. 10ನೇ ಶೆಡ್ಯೂಲ್ ನಲ್ಲಿ ಅನರ್ಹತೆ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. 10ನೇ ಶೆಡ್ಯೂಲ್ ಉಲ್ಲಂಘನೆ ಆಗಿದೆ. ಆದ್ರೆ ನೈತಿಕ ಹೊಣೆ ಹೊತ್ತು ಅವರು ಕೂಡಲೇ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಮನೆಗೆ ಗೃಹ ಸಚಿವರು ಹೋಗಿದ್ರು ದಿವ್ಯಾ ಹಾಗರಗಿ ಮನೆಯಿಂದ ಏನೇನು ಕಪ್ಪ ಕಾಣಿಕೆ ಸಲ್ಲಿಕೆ ಆಗಿದೆಯೋ? ದಿವ್ಯಾಹಾಗರಗಿಯಿಂದ ಗೃಹ ಸಚಿವರಿಗೆ ಸಲ್ಲಿಕೆ ಆಗಿರುವ ಕಪ್ಪ ಕಾಣಿಕೆ ವಿಷಯ ಹೊರಗೆ ಬಂದಿಲ್ಲ ಎಂದು ಆರೋಪಿಸಿದರು.
ಪರಿಷತ್ ನ ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಮಾತನಾಡಿ, ಇದು ಪರಿಷತ್ ನಲ್ಲಿರೋರೆಲ್ಲ ತಲೆ ತಗ್ಗಿಸುವ ವಿಚಾರ. ಹೊರಟ್ಟಿ ಅವರಿಗೆ ಬಿಜೆಪಿ ಮತ್ತೆ ಸಭಾಪತಿ ಹುದ್ದೆಯ ಆಮಿಷ ಕೊಟ್ಟಿದೆ. 42 ವರ್ಷ ಜಾತ್ಯಾತೀತ ಸಿದ್ಧಾಂತ ಅನುಸರಿಸಿದವರು ಹೊರಟ್ಟಿ
ಈಗ ಒಂದು ಕೋಮುವಾದಿ ಪಕ್ಷಕ್ಕೆ ಸೇರುತ್ತಿದ್ದಾರೆ. ಬಿಜೆಪಿಯ ಆಸೆ ಆಮಿಷಗಳಿಗೆ ಬಲಿಯಾಗಿದ್ದಾರೆ ಹೊರಟ್ಟಿ ಆಪರೇಷನ್ ಕಮಲದ ಮತ್ತೊಂದು ವಿಕೆಟ್ ಎಂದು ಹೇಳಿದರು.