ತನ್ನ ಬ್ಯಾಂಕ್ ಖಾತೆಯನ್ನು ಅನುಮತಿ ಇಲ್ಲದೇ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಸ್ಯಾಂಡಲ್ವುಡ್ ನಟಿಯಾಗಿದ್ದ ಚೈತ್ರಾ ಬಿ ಪೋತರಾಜ್ ಅವರು ತನ್ನ ಪತಿ ಬಾಲಾಜಿ ಪೋತರಾಜ್ ಹಾಗೂ ಮಾವ ಪೋತರಾಜ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಲ್ಡ್ ಲೋನ್ ಪಡೆಯುವ ವೇಳೆ ತನ್ನ ಸಹಿಯನ್ನು ನಕಲು ಮಾಡಲಾಗಿದೆ. ಈ ಅವ್ಯವಹಾರದಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡ ಶಾಮೀಲಾಗಿದ್ದು, ಪ್ರಕರಣ ಸಂಬಂಧ ತಮಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಅವರು ಮೂರು ದಿನಗಳ ಹಿಂದೆಯೇ ದೂರು ನೀಡಿದ್ದಾರೆ.
ಈಗಾಗಲೇ ಪತಿಯ ವಿರುದ್ಧ ದೈಹಿಕ ಹಲ್ಲೆ ಆರೋಪದಡಿ ಕೇಸು ದಾಖಲಿಸಿದ್ದೇನೆ. ಇದೀಗ ನನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿ ಮತ್ತೆ ದೂರು ನೀಡುತ್ತಿದ್ದೇನೆ ಎಂದು ಪೊಲೀಸ್ ದೂರಿನಲ್ಲಿ ನಟಿ ಚೈತ್ರಾ ಉಲ್ಲೇಖಿಸಿದ್ದಾರೆ.
ದೂರಿನ ಆಧಾರದ ಮೇಲೆ, ಜಯಲಕ್ಷ್ಮಿಪುರಂ ಪೊಲೀಸರು ಐಪಿಸಿ ಸೆಕ್ಷನ್ 466 (ನಕಲಿ), 406 ಮತ್ತು 409 (ಕ್ರಿಮಿನಲ್ ಉಲ್ಲಂಘನೆ), 420 (ವಂಚನೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳಿಂದ ಮಾಡಿದ ಕೃತ್ಯ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ನಟಿ ಚೈತ್ರಾ ಅವರು ಕನ್ನಡದ ಪ್ರಮುಖ ಚಿತ್ರಗಳಾಗಿರುವ ಗುರು ಶಿಷ್ಯ, ಶ್ರೀ ದಾನಮ್ಮ ದೇವಿ ಚಿತ್ರಗಳಲ್ಲಿ ನಟಿಸಿದ್ದಾರೆ.