ನಗರದ ಹಲವು ರಸ್ತೆಗಳಲ್ಲಿ ರಾರಾಜಿಸುತ್ತಿದ್ದ ಸರಿಸುಮಾರು 5 ಸಾವಿರ ಅಕ್ರಮ ಬ್ಯಾನರ್ ಗಳನ್ನು ಬಿಬಿಎಂಪಿ ತೆರವುಗೊಳಿಸಿದೆ.
ಅಕ್ರಮ ಬ್ಯಾನರ್ ಗಳ ಪತ್ತೆಯೆ ಜಿಪಿಎಸ್ ಕ್ಯಾಮೆರಾಗಳನ್ನು ಬಳಕೆ ಮಾಡಲಾಗಿದ್ದು, ಜಂಟಿ ಆಯುಕ್ತರ ನೇತೃತ್ವದಲ್ಲಿ ಎಂಟು ವಲಯಗಳಲ್ಲಿ 200 ಸಿಬ್ಬಂದಿಗಳ ತಂಡ ವಿಶೇಷ ಅಭಿಯಾನ ನಡೆಸಿ 5 ಸಾವಿರಕ್ಕೂ ಹೆಚ್ಚು ಬ್ಯಾನರ್ ಗಳನ್ನು ತೆರವುಗೊಳಿಸಿದೆ.
ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತ ದೀಪಕ್ ಆರ್‌ಎಲ್ ಅವರು ಮಾತನಾಡಿ, ಅಂತರರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಅಕ್ರಮ ಬ್ಯಾನರ್‌ಗಳ ಕುರಿತು ನಮಗೆ ಸಾಕಷ್ಟು ದೂರುಗಳು ಬಂದಿದ್ದವು. ಸಿಎಂ ಬೊಮ್ಮಾಯಿ ನಿವಾಸದ ಎದುರಿನ ಕನಕದಾಸ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೆಲ ಸಂಘಟಕರು ಬ್ಯಾನರ್’ಗಳನ್ನು ಹಾಕಿದ್ದರು. ಹೀಗಾಗಿ ಎಲ್ಲಾವಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಿ ಜಿಪಿಎಸ್ ಕ್ಯಾಮೆರಾಗಳನ್ನು ಬಳಸಿ ಅಕ್ರಮ ಬ್ಯಾನರ್ ಗಳನ್ನು ತೆರವುಗೊಳಿಸಿದೆವು. ನಾಲ್ಕು ಗಂಟೆಗಳಲ್ಲಿ ಈ ಕಾರ್ಯಾಚರಣೆಯನ್ನು ಮಾಡಲಾಯಿತು ಎಂದು ಹೇಳಿದ್ದಾರೆ.
ಹೈಕೋರ್ಟ್ ಆದೇಶದ ಹೊರತಾಗಿಯು ನಗರದಲ್ಲಿ ಅಕ್ರಮ ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ನಾಯಿಕೊಡೆಗಳಂತೆ ಹೆಚ್ಚಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ರಾಜಕೀಯ ಮುಖಂಡರನ್ನು ಸ್ವಾಗತಿಸುವ ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಜೂನ್ 20 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಸಚಿವರೇ, ಸಾಕಷ್ಟು ಬ್ಯಾನರ್‌ಗಳನ್ನು ಅಳವಡಿಸಿದ್ದರು.