ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರ ಸಾಯಂಕಾಲ ಗಂಟೆಗಳ ಕಾಲ ಸುರಿದ 100 ಮಿಲಿ ಮೀಟರ್ ಗೂ ಅಧಿಕ ಮಳೆಯಿಂದ ಆದ ಅವಾಂತರಗಳು ಅಷ್ಟಿಷ್ಟಲ್ಲ, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮನೆಗಳಿಗೆ ನೀರು ನುಗ್ಗಿದೆ.
ಮನೆಗಳಿಗೆ ನೀರು ನುಗ್ಗಿ ಆದ ನಷ್ಟವನ್ನು ಭರಿಸಲು ಸರ್ಕಾರದಿಂದ ಪರಿಹಾರ ಘೋಷಣೆಯಾಗಿದೆ. ಇಂದು ಬೆಳಗ್ಗೆ ಕಂದಾಯ ಸಚಿವ ಆರ್ ಅಶೋಕ್ ಮತ್ತು ತೋಟಗಾರಿಕಾ ಸಚಿವ ವಿ ಮುನಿರತ್ನ, ಸರ್ಕಾರದ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳೊಂದಿಗೆ ತೀವ್ರ ಹಾನಿಗೀಡಾಗಿರುವ ಹೊಸಕೆರೆಹಳ್ಳಿಯ ದತ್ತಾತ್ರೇಯ ದೇವಸ್ಥಾನ ಹತ್ತಿರದ ಸ್ಥಳಗಳು, ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಿಟಿ ರೌಂಡ್ಸ್ ಮಾಡಿದ ಸಿಎಂ ಬೊಮ್ಮಾಯಿ ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಲೇ ಔಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕಾಲುವೆ ಒತ್ತುವರಿಯಿಂದಾಗಿ ತೀವ್ರ ಮಳೆಯಾದಾಗ ಈ ರೀತಿ ಮನೆಗಳಿಗೆ ನೀರು ನುಗ್ಗುತ್ತಿದೆ. ಕಾಲುವೆ ಪಕ್ಕದಲ್ಲಿ ಮನೆ ಕಟ್ಟಿಕೊಂಡಿರುವುದರಿಂದ ಈ ರೀತಿ ಹಾನಿಯಾಗುತ್ತದೆ. ನೀರು ನುಗ್ಗಿ ಸಮಸ್ಯೆಯಾದವರಿಗೆ ಊಟ ತಿಂಡಿ, ಮನೆ ಕ್ಲೀನ್ ಮಾಡಿಕೊಡುವ ವ್ಯವಸ್ಥೆ ಮಾಡುತ್ತೇವೆ. ಈ ಅವಾಂತರಕ್ಕೆ ಏನು ಕಾರಣ ಎಂದು ಚರ್ಚಿಸಿ ಒಂದು ವರ್ಷದಲ್ಲಿ ಎಲ್ಲಾ ಸರಿಪಡಿಸುವ ಕೆಲಸ ಮಾಡುತ್ತೇವೆ. ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಸಿಎಂ ಹೇಳಿದರು.