ಬಾಗಲಕೋಟೆಯ ಬಾದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ನಡೆದಿದೆ. ಈ ಗಲಾಟೆಯಲ್ಲಿ 3 ಜನರಿಗೆ ಗಂಭೀರ ಗಾಯಗಳಾಗಿವೆ.
ಹಿಂದೂ-ಮುಸ್ಲಿಂ ಗುಂಪುಗಳ ನಡುವೆ ನಡೆದ ಈ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 18 ಜನರನ್ನು ಬಂಧಿಸಿದ್ದಾರೆ. ಪ್ರಸ್ತುತ, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಜುಲೈ 8 ರ ರಾತ್ರಿ 8 ರವರೆಗೆ ಕೆರೂರು ಪಟ್ಟಣದಲ್ಲಿ ಸೆಕ್ಷನ್ 144 ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜುಲೈ 6 ರಂದು ಕೆರೂರು ಪಟ್ಟಣದ ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಚುಡಾಯಿಸಿದ್ದ ವಿಚಾರಕ್ಕೆ ಕೆಲ ಯುವಕರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯೇ ತೀವ್ರ ಸ್ವರೂಪ ಪಡೆದುಕೊಂಡಿತು ಎಂದು ತಿಳಿದುಬಂದಿದೆ. ಈ ಘಟನೆ ಬೆನ್ನಲ್ಲೇ ಕೆಲವರು ತಳ್ಳುವ ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಹಿಂದೂ-ಮುಸ್ಲಿಂ ಕೋಮಿನ ಜನರ ನಡುವೆ ಗಲಾಟೆ ಮೂವರು ಗಾಯಗೊಂಡಿದ್ದಾರೆ. ಗುಂಪು ಘರ್ಷಣೆಯಲ್ಲಿ ಗಾಯಗೊಂಡವರನ್ನು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರಣ್ ಮತ್ತು ಆತನ ಸಹೋದರ ಹಾಗೂ ಯಮನೂರು ಎಂದು ಗುರುತಿಸಲಾಗಿದೆ.
ಘರ್ಷಣೆಗೆ ಸಂಬಂಧಿಸಿದಂತೆ ಎರಡೂ ಗುಂಪಿನ 18 ಕ್ಕೂ ಹೆಚ್ಚು ಜನರನ್ನು ಕೆರೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಗಲಕೋಟೆ ಉಪವಿಭಾಗದ ವಿವಿಧ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಸದ್ಯಕ್ಕೆ ಇಡೀ ಕೆರೂರ ಪಟ್ಟಣ ಪೊಲೀಸರ ಸರ್ಪಗಾವಲಿನಲ್ಲಿದೆ.