BIG BREAKING: ಬಿ ಎಲ್​ ಸಂತೋಷ್​​ ವಿರುದ್ಧ FIR – ಆಪರೇಷನ್​ ಕಮಲದಲ್ಲಿ ಆರೋಪಿ

ತೆಲಂಗಾಣ ರಾಜ್ಯದಲ್ಲಿ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನಾಲ್ವರು ಶಾಸಕರನ್ನು ಆಪರೇಷನ್​ ಕಮಲಕ್ಕೆ ಯತ್ನಿಸಿದ್ದರ ಸಂಬಂಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಲ್​ ಸಂತೋಷ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಸೈಬರ್​ಬಾದ್​ ನಗರದ ಮೊಯಿನ್​ಬಾದ್​ ಪೊಲೀಸ್​ ಠಾಣೆಯಲ್ಲಿ ಆಪರೇಷನ್​ ಕಮಲ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.
ಈ ಮೂಲಕ ಆಪರೇಷನ್​ ಕಮಲ ಹಗರಣದ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ.
ಬೊಮ್ಮರಬೆಟ್ಟು ಲಕ್ಷ್ಮೀ ಜನಾರ್ದನ ಸಂತೋಷ್​ ( ಬಿ ಎಲ್​ ಸಂತೋಷ್​), ಕೇರಳ ರಾಜ್ಯದ ಭಾರತ್​​ ಧರ್ಮ ಜನಸೇನಾ ಹಾಗೂ ಕೇರಳ ಎನ್​ಡಿಎ ಘಟಕದ ಅಧ್ಯಕ್ಷ ತುಷಾರ್​ ವೆಲ್ಲಪಲ್ಲಿ, ಕೇರಳ ಮೂಲದ ವೈದ್ಯ ಜಗ್ಗು ಕೋಟಿಲಿಲ್​, ವಕೀಲ ಭೂಸರಪು ಶ್ರೀನಿವಾಸ್​ ಇವರನ್ನು ಆರೋಪಿಗಳನ್ನಾಗಿ ಪರಿಗಣಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್​ಐಟಿ ಪೊಲೀಸರು ಎಸಿಬಿ ಕೋರ್ಟ್​​ಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಆಪರೇಷನ್​ ಕಮಲದ ದಲ್ಲಾಳಿಗಳಾದ ರಾಮಚಂದ್ರಭಾರತಿ, ಉದ್ಯಮಿ ಕೆ ನಂದಕುಮಾರ್​ ಮತ್ತು ಸಿಮಿಯಾಜಿ ಸ್ವಾಮೀಜಿ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಈಗ ಈ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಿ ಎಲ್​ ಸಂತೋಷ್​​ಗೆ ಮತ್ತೆ ಸಮನ್ಸ್​:
ನವೆಂಬರ್​ 21ರಂದು ವಿಚಾರಣೆಗೆ ಹಾಜರಾಗದೇ ಗೈರಾಗಿದ್ದ ಬಿ ಎಲ್​ ಸಂತೋಷ್​ಗೆ ಎಸ್​ಐಟಿ ಪೊಲೀಸರು ಎರಡನೇ ನೋಟಿಸ್​ ಜಾರಿಗೊಳಿಸಿದ್ದಾರೆ. ನವೆಂಬರ್​ 26 ಅಥವಾ 28ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ಅಪರಾಧ ದಂಡ ಸಂಹಿತೆಯ 41 ಎ ಕಲಂನ ಅಡಿಯಲ್ಲಿ ನವೆಂಬರ್​ 16ರಂದು ಸಂತೋಷ್​ಗೆ ನೋಟಿಸ್​ ನೀಡಲಾಗಿತ್ತು. ನವೆಂಬರ್​ 21ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಒಂದು ವೇಳೆ ವಿಚಾರಣೆಗೆ ಗೈರಾದರೆ ಬಂಧಿಸುವ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದರು.
ಬಂಧನಕ್ಕೆ ತಡೆ, ಎರಡನೇ ಸಮನ್ಸ್​ಗೆ ಸೂಚನೆ:
ಆಪರೇಷನ್​ ಕಮಲ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ತೆಲಂಗಾಣ ರಾಜ್ಯ ಹೈಕೋರ್ಟ್​​ನ ಏಕಸದಸ್ಯ ಪೀಠ ಸಂತೋಷ್​ ಅವರನ್ನು ಬಂಧಿಸದಂತೆ ನವೆಂಬರ್​ 19ರಂದು ಎಸ್​ಐಟಿಗೆ ಸೂಚಿಸಿತ್ತು. ಆದರೆ ವಿಚಾರಣೆಗೆ ಸಹಕರಿಸುವಂತೆ ಸಂತೋಷ್​​ ಅವರಿಗೆ ಆದೇಶಿಸಿತ್ತು.
ಆದರೆ ಮೊದಲ ಸಮನ್ಸ್​ ಸ್ವೀಕರಿಸಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಂತೋಷ್​ ವಿರುದ್ಧ ಎಸ್​ಐಟಿ ಮತ್ತೆ ಹೈಕೋರ್ಟ್​​ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಸಮನ್ಸ್​​ ನೀಡುವಂತೆ ಸೂಚಿಸಿರುವ ಹೈಕೋರ್ಟ್​​ ಬಂಧನಕ್ಕೆ ನೀಡಿರುವ ತಡೆಯನ್ನು ಮುಂದುವರಿಸಿದೆ.