ಮಧ್ಯಪ್ರದೇಶದ ಸಿವನಿ ಜಿಲ್ಲೆಯಲ್ಲಿ ಗೋಹತ್ಯೆ ಮಾಡಿರುವ ಆರೋಪದಲ್ಲಿ ಇಬ್ಬರು ಬುಡಕಟ್ಟು ವ್ಯಕ್ತಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಕುರೈ ಪೊಲೀಸ್ ಠಾಣಾ ವ್ಯಾಪ್ತಿಯ ಸಿಮಾರಿಯಾ ಗ್ರಾಮದಲ್ಲಿ ಗೋಹತ್ಯೆ ಆರೋಪದ ಮೇಲೆ 15 ರಿಂದ 20 ಜನರಿದ್ದ ಗುಂಪು ಥಳಿಸಿದ ನಂತರ ಮಂಗಳವಾರ ಬೆಳಗ್ಗೆ ಇಬ್ಬರು ಬುಡಕಟ್ಟು ವ್ಯಕ್ತಿಗಳು ಮೃತಪಟ್ಟಿದ್ದರು. ದಾಳಿ ನಡೆಸಿದವರು ಬಜರಂಗ ದಳದ ಕಾರ್ಯಕರ್ತರು ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಘಟನೆಯ ನಂತರ, ಪ್ರತಿಪಕ್ಷ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಕೋಡಿಯಾ ನೇತೃತ್ವದ ಗುಂಪು ಮಂಗಳವಾರ ಜಬಲ್ಪುರ-ನಾಗಪುರ ಹೆದ್ದಾರಿಯಲ್ಲಿ 6 ಗಂಟೆಗಳ ಕಾಲ ಪ್ರತಿಭಟನೆ ನಡೆಸಿತು. ಮೃತರ ಕುಟುಂಬಕ್ಕೆ ಉದ್ಯೋಗ ಮತ್ತು ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿತು. ಜಿಲ್ಲಾಡಳಿತದ ಭರವಸೆ ಮೇರೆಗೆ ಪ್ರತಿಭಟನೆ ಅಂತ್ಯಗೊಳಿಸಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಾಸ್ತೆ ಅವರು, ಹಸುವಿನ ಮಾಂಸದ ವಿಷಯದಲ್ಲಿ ವಿವಾದ ಆರಂಭವಾಗಿದ್ದು, ಘಟನೆಯಲ್ಲಿ ಯಾವುದೇ ಸಂಘಟನೆ ಭಾಗಿಯಾಗಿದೆ ಎಂದು ಹೇಳುವುದು ಸರಿಯಲ್ಲ. ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಅವರು ಹೇಳಿದರು.
ಘಟನೆಯಲ್ಲಿ ಗಾಯಗೊಂಡಿರುವ ಬ್ರಜೇಶ್ ಬಟ್ಟಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿರುವ ಪ್ರಕಾರ, ಮಂಗಳವಾರ ಮುಂಜಾನೆ 2.30 ಯಿಂದ 3 ಗಂಟೆ ಸುಮಾರಿಗೆ 15-20 ಜನರ ಗುಂಪು ಸಾಗರ್ ಗ್ರಾಮದ ನಿವಾಸಿ ಸಂಪತ್ಲಾಲ್ ಬಟ್ಟಿ ಮತ್ತು ಸಿಮಾರಿಯ ನಿವಾಸಿ ಧನ್ಸೆ ಇನವಾಟಿ ಅವರನ್ನು ಗೋಹತ್ಯೆ ಆರೋಪದ ಮೇಲೆ ಕೋಲುಗಳಿಂದ ಥಳಿಸಿದೆ. ಈ ವೇಳೆ ಸ್ಥಳಕ್ಕೆ ಬಂದ ನನ್ನನ್ನೂ ಥಳಿಸಲಾಯಿತು ಎಂದು ಬ್ರಜೇಶ್ ಬಟ್ಟಿ ಹೇಳಿದ್ದಾರೆ. ಇನವಾಟಿ ಮತ್ತು ಸಂಪತ್ಲಾಲ್ ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.