ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸ್ತಾರಾ ಅಥವಾ ಬಿಜೆಪಿ ಪರ ಪ್ರಚಾರ ಮಾಡ್ತಾರಾ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್..?
ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ದಿವಂಗತ ಮಾಜಿ ಮುಖ್ಯಮಂತ್ರಿ
ಎಸ್ ಬಂಗಾರಪ್ಪ ಅವರ ಮಗಳು ಗೀತಾ ಶಿವರಾಜ್ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ನನ್ನ ಪತ್ನಿಯನ್ನು ಸಂಸದೆಯನ್ನಾಗಿ ನೋಡ್ಬೇಕು ಎಂಬ ಆಸೆ ಇದೆ ಎಂದು ಬಹಿರಂಗವಾಗಿ ಶಿವರಾಜ್ಕುಮಾರ್ ಅವರು ಹೇಳಿಕೊಂಡಿದ್ದಾರೆ.
ಇದೇ ಹೊತ್ತಲ್ಲಿ ಶಿವರಾಜ್ಕುಮಾರ್ ಅವರ ಸಹೋದರರೂ ಆಗಿರುವ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿಯಾಗಿದ್ದಾರೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಕರಂದ್ಲಾಜೆ ಅವರ ಜೊತೆಗೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಡಿಸಿಎಂ ಡಾ ಸಿ ಎನ್ ಅಶ್ವತ್ಥ್ ನಾರಾಯಣ ಕೂಡಾ ಇದ್ದರು.
ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ, ಲೋಕಸಭಾ ಚುನಾವಣೆಗೆ ಬೆಂಬಲ ನೀಡುವಂತೆ ಮನವಿ ಮಾಡಲಾಯಿತು ಎಂದು ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಕುಟುಂಬವನ್ನು ರಾಜಕೀಯ ಎಳೆದು ತರುವುದಕ್ಕೆ ಬಿಜೆಪಿ ಮಾಡ್ತಿರುವ ಪ್ರಯತ್ನಗಳು ಇದೇ ಮೊದಲಲ್ಲ. ಆದರೆ ಬಿಜೆಪಿ ತಂತ್ರ-ಕುತಂತ್ರಗಳಿಗೆ ದೊಡ್ಮನೆ ಹುಡುಗ ಕ್ಯಾರೇ ಅಂದಿರಲಿಲ್ಲ. ರಾಜಕೀಯದಿಂದ ದೂರವೇ ಇದ್ದರು.
ಆದರೆ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ರಾಜಕೀಯ ಕುಟುಂಬದ ಹಿನ್ನೆಲೆಯವರು. ಎಲ್ಲರಿಗೂ ಗೊತ್ತಿರುವಂತೆ ಅವರ ತಂದೆ ಎಸ್ ಬಂಗಾರಪ್ಪ ಸಿಎಂ ಆಗಿದ್ದವರು. ಸಹೋದರ ಮಧು ಬಂಗಾರಪ್ಪ ಸೊರಬ ಶಾಸಕ ಮತ್ತು ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ. ಕುಮಾರ್ ಬಂಗಾರಪ್ಪ ಮಾಜಿ ಶಾಸಕರು. ಈ ಹಿಂದೆಯೂ ಗೀತಾ ಶಿವರಾಜ್ಕುಮಾರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಆದರೆ ಪವರ್ಸ್ಟಾರ್ ಕುಟುಂಬವನ್ನು ರಾಜಕೀಯಕ್ಕೆ ಎಳೆದು ತರುವ ಬಿಜೆಪಿಯ ಪ್ರಯತ್ನಕ್ಕೆ ಫಲ ಸಿಗುತ್ತಾ..?
2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿಯವರನ್ನು ಏರ್ಪೋರ್ಟ್ನಲ್ಲಿ ಭೇಟಿಯಾಗಿದ್ದರು ಪುನೀತ್ ರಾಜ್ಕುಮಾರ್ ದಂಪತಿ. ಆಗ ಡಾ ರಾಜ್ಕುಮಾರ್ ಅವರ ಬಗ್ಗೆ ಬರೆದಿದ್ದ ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ ಎಂಬ ಪುಸ್ತಕವನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು.
ಈ ಭೇಟಿ ವೇಳೆ ರಾಜಕೀಯಕ್ಕೆ ಬರುವಂತೆ ಪುನೀತ್ ಅವರಿಗೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದರು. ಆದರೆ ಆ ಆಹ್ವಾನವನ್ನು ಪುನೀತ್ ಅವರು ಒಪ್ಪಿರಲಿಲ್ಲ. ಇದಾದ ಒಂದು ವರ್ಷದೊಳಗೆ ಜನವರಿ 4, 2019ರಂದು ಆದಾಯ ತೆರಿಗೆ ಇಲಾಖೆ ನಟ ಪುನೀತ್ ರಾಜ್ಕುಮಾರ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು.
ಬಿಜೆಪಿಯ ಪರ ವಕಾಲತ್ತು ವಹಿಸಲು ನಿರಾಕರಿಸಿದ್ದರು ಎಂಬ ಕಾರಣಕ್ಕೆ ಆ ದಾಳಿ ನಡೆಸಲಾಗಿತ್ತು ಎಂಬ ಗುಸುಗುಸು ಗಾಂಧಿನಗರದಲ್ಲಿ ಹರಿದಾಡಿತ್ತು.
ಕಳೆದ ವರ್ಷ ವಿಧಾನಸಭಾ ಚುನಾವಣೆ ಘೋಷಣೆಗೂ ಒಂದು ತಿಂಗಳು ಮೊದಲು ಅಂದರೆ ಫೆಬ್ರವರಿ 13ರಂದು ಪ್ರಧಾನಿ ಮೋದಿ ಬೆಂಗಳೂರು ಪ್ರವಾಸ ಕೈಗೊಂಡಿದ್ದಾಗ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಮೋದಿಯವರನ್ನು ಭೇಟಿಯಾಗಿದ್ದರು ಅಶ್ವಿನಿ ಪುನೀತ್ ರಾಜ್ಕುಮಾರ್.
ಬಿಜೆಪಿಗೆ ಬರುವಂತೆ ರಾಜ್ಯ ನಾಯಕರ ದಂಡು ಅಶ್ವಿನಿ ಅವರ ಮನೆಗೆ ತೆರಳಿ ಪ್ರತ್ಯೇಕ ಆಹ್ವಾನವನ್ನೂ ನೀಡಿತ್ತು.
ನಿಧನಕ್ಕೂ 10 ತಿಂಗಳು ಮೊದಲು ಮಾರ್ಚ್ 21, 2021ರಂದು ನೀವು ರಾಜಕೀಯಕ್ಕೆ ಬರ್ತಿರಾ ಸರ್ ಎಂದು ಮಾಧ್ಯಮದವರು ಪುನೀತ್ ರಾಜ್ಕುಮಾರ್ ಅವರಿಗೆ ಕೇಳ್ತಾರೆ. ರಾಜಕೀಯನಾ..? ಯಾಕೆ..? ಪ್ರೀತಿ-ವಿಶ್ವಾಸ ಇರ್ಬೆಕಾದ್ರೆ ರಾಜಕೀಯ ಯಾಕೆ ಬೇಕು..? ಇಷ್ಟು ಜನ ಪ್ರೀತಿ ವಿಶ್ವಾಸ ತೋರಿಸಿದ್ರಲ್ಲ ಸಾಕು ಎಂದು ಉತ್ತರ ಕೊಟ್ಟಿದ್ದರು ಪುನೀತ್ ರಾಜ್ಕುಮಾರ್.
2014ರ ಏಪ್ರಿಲ್ 17ರಂದು ಇಂಡಿಯಾ ಟುಡೇಗೆ ಕೊಟ್ಟ ಚುಟುಕು ಸಂದರ್ಶನದಲ್ಲಿ ದೇಶದಲ್ಲಿ ಮೋದಿ ಅಲೆ ಇದೆ ಎನ್ನುವುದನ್ನು ಪವರ್ ಸ್ಟಾರ್ ಅವರು ಒಪ್ಪಿಕೊಂಡಿದ್ದರು.
ಈಗ ಮತ್ತೆ ಪುನೀತ್ರಾಜ್ಕುಮಾರ್ ಕುಟುಂಬಕ್ಕೆ ಗಾಳ ಹಾಕಿದೆ. ರಾಜಕೀಯದಿಂದ ದೂರ ಇರುವ ಅಣ್ಣಾವ್ರ ಡಾ ರಾಜ್ಕುಮಾರ್ ಅವರ ಹಾದಿಯನ್ನೇ ತುಳಿದ ಅಪ್ಪು ಪುನೀತ್ರಾಜ್ಕುಮಾರ್ ಅವರಂತೆ ಅಶ್ವಿನಿ ಅವರು ರಾಜಕೀಯದಿಂದ ದೂರ ಇರುತ್ತಾರಾ..? ಅಥವಾ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ತಾರಾ..?