ಅಗ್ನಿಪಥ್ ಯೋಜನೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಭಾರತೀಯ ಸೇನೆಯು ಅಗ್ನಿಪಥ್ ಮಿಲಿಟರಿ ನೇಮಕಾತಿ ಯೋಜನೆಯಡಿ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಎಲ್ಲ ಉದ್ಯೋಗಾಕಾಂಕ್ಷಿಗಳು ಸೇನೆಯ ನೇಮಕಾತಿ ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಸೇನೆ ತಿಳಿಸಿದೆ. ಜುಲೈನಿಂದ ನೋಂದಣಿ ಆರಂಭವಾಗಲಿದೆ.
ಭಾರತೀಯ ಸೇನೆಯಲ್ಲಿ ‘ಅಗ್ನಿವೀರ’ರದ್ದು ಒಂದು ವಿಶಿಷ್ಟ ಶ್ರೇಣಿಯಾಗಿದ್ದು, ಅಸ್ತಿತ್ವದಲ್ಲಿರುವ ಯಾವುದೇ ಶ್ರೇಣಿಗಳಿಗಿಂತ ಭಿನ್ನವಾಗಿರುತ್ತದೆ ಎಂದು ಸೇನೆ ಹೇಳಿದೆ.
ಸೇನೆಯು ಕಳೆದ ರಾತ್ರಿ ಬಿಡುಗಡೆ ಮಾಡಿರುವ ಈ ಯೋಜನೆಯ ವಿವರವಾದ ಟಿಪ್ಪಣಿಯಲ್ಲಿ ‘ಅಗ್ನಿವೀರ’ರು ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ಗಳಿಸಿದ ವರ್ಗೀಕೃತ ಮಾಹಿತಿ ಅಥವಾ ಮೂಲವನ್ನು ಯಾವುದೇ ಅನಧಿಕೃತ ವ್ಯಕ್ತಿಗೆ ಬಹಿರಂಗಪಡಿಸುವುದನ್ನು ಅಧಿಕೃತ ರಹಸ್ಯ ಕಾಯಿದೆ, 1923 ರ ಅಡಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಯೋಜನೆಯ ಜಾರಿಯೊಂದಿಗೆ, ವೈದ್ಯಕೀಯ ಶಾಖೆಯ ತಾಂತ್ರಿಕ ವರ್ಗಗಳನ್ನು ಹೊರತುಪಡಿಸಿ ಭಾರತೀಯ ಸೇನೆಯ ಸಾಮಾನ್ಯ ಕೇಡರ್ನಲ್ಲಿ ಯೋಧರ ದಾಖಲಾತಿಗೆ ಅಗ್ನಿವೀರರಾಗಿ ನಿಗದಿತ ಅವಧಿ ಪೂರ್ಣಗೊಳಿಸಿದ ಸಿಬ್ಬಂದಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ನಿಗದಿತ ಅವಧಿಗಿಂತ ಮೊದಲು ಅಗ್ನಿವೀರರನ್ನು ಅವರ ಮನವಿ ಮೇರೆಗೆ ಸೇವೆಯಿಂದ ಬಿಡುಗಡೆ ಮಾಡುವ ಅವಕಾಶ ಇಲ್ಲ ಎಂದು ಸೇನೆ ಹೇಳಿದೆ.