ADVERTISEMENT
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಿತ್ತಿಪತ್ರಗಳನ್ನು ಅಂಟಿಸಿದ ಆರೋಪದಡಿಯಲ್ಲಿ 100 ಎಫ್ಐಆರ್ಗಳನ್ನು ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಭಿತ್ತಿಪತ್ರಗಳನ್ನು ಮುದ್ರಿಸಿದ ಮುದ್ರಣ ಸಂಸ್ಥೆಯ ಇಬ್ಬರು ಮಾಲೀಕರು ಸೇರಿದ್ದಾರೆ. ಭಿತ್ತಿಪತ್ರಗಳನ್ನು ವ್ಯಾನ್ನಲ್ಲಿ ಸಾಗಿಸ್ತಿದ್ದ ಓರ್ವನನ್ನು ಬಂಧಿಸಲಾಗಿದೆ. ಜೊತೆಗೆ ಭಿತ್ತಿಪತ್ರ ಸಾಗಿಸ್ತಿದ್ದ ವ್ಯಾನ್ನ್ನೂ ವಶಕ್ಕೆ ಪಡೆಯಲಾಗಿದೆ.
ರಾಜಧಾನಿ ದೆಹಲಿಯ ಹಲವು ಕಡೆಗಳಲ್ಲಿ ಮೋದಿ ತೊಲಗಿಸಿ, ದೇಶ ಉಳಿಸಿ ಭಿತ್ತಿಪತ್ರವನ್ನು ಅಂಟಿಸಲಾಗಿತ್ತು. 2 ಸಾವಿರ ಭಿತ್ತಿಪತ್ರಗಳನ್ನು ತೆಗೆಯಲಾಗಿದೆ ಮತ್ತು 2 ಸಾವಿರ ಭಿತ್ತಿಪತ್ರವನ್ನು ವಶಕ್ಕೆ ಪಡೆಯಲಾಗಿದೆ.
ಸಾರ್ವಜನಿಕ ಸ್ವತ್ತನ್ನು ವಿರೂಪಗೊಳಿಸಿದ ಆರೋಪ ಮತ್ತು ಮುದ್ರಿಸಲಾದ ಭಿತ್ತಿಪತ್ರದಲ್ಲಿ ಮುದ್ರಣ ಸಂಸ್ಥೆಯ ಹೆಸರನ್ನು ನಮೂದು ಮಾಡದೇ ಇರುವ ಹಿನ್ನೆಲೆಯಲ್ಲಿ ಪ್ರೆಸ್ ರಿಜಿಸ್ಟ್ರೇಷನ್ ಮತ್ತು ಬುಕ್ಸ್ ಕಾಯ್ದೆಯಡಿ ಎಫ್ಐ ಆರ್ ದಾಖಲಿಸಿಕೊಳ್ಳಲಾಗಿದೆ.
ಆಮ್ ಆದ್ಮಿ ಪಕ್ಷದ ರಣತಂತ್ರ:
ಮಾಹಿತಿಗಳ ಪ್ರಕಾರ ಎರಡು ಮುದ್ರಣ ಸಂಸ್ಥೆಗಳಿಗೆ ಮೋದಿ ವಿರುದ್ಧದ 50 ಸಾವಿರ ಭಿತ್ತಿಪತ್ರಗಳನ್ನು ಮುದ್ರಿಸುವಂತೆ ಹೇಳಲಾಗಿತ್ತು.
ದೆಹಲಿಯಲ್ಲಿ ಆಡಳಿತದಲ್ಲಿರುವ ಆಮ್ ಆದ್ಮಿ ಪಕ್ಷ ಈ ಭಿತ್ತಿಪತ್ರಗಳನ್ನು ಮುದ್ರಿಸಲು ಹೇಳಿತ್ತು ಮತ್ತು ಇವುಗಳನ್ನು ಆಪ್ನ ಮುಖ್ಯ ಕಚೇರಿಗೆ ಸಾಗಿಸಲಾಗ್ತಿತ್ತು ಎಂದು ಬಂಧಿತರು ಮಾಹಿತಿ ನೀಡಿದ್ದಾರೆ.
ಎರಡು ವರ್ಷ ಹಿಂದೆಯೂ:
ಕೋವಿಡ್ ಲಸಿಕೆ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೆಹಲಿಯಲ್ಲಿ 2021ರಲ್ಲೂ ಇದೇ ರೀತಿ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಆಗ 19 ವರ್ಷದ ಯುವಕ, ಆಟೋ ಚಾಲಕ ಒಳಗೊಂಡಂತೆ 22 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ADVERTISEMENT