ಕೇಂದ್ರ ಸರ್ಕಾರ ಸೇನಾ ನೇಮಕಾತಿಗೆ ಘೋಷಣೆ ಮಾಡಿರುವ ಅಗ್ನಿಪಥ್ ಯೋಜನೆಯ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದೆ. ತೆಲಂಗಾಣದ ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಅಭ್ಯರ್ಥಿಗಳು ಉಗ್ರಸ್ವರೂಪದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈಲ್ವೇ ಇಲಾಖೆಯ ಆಸ್ತಿ ಪಾಸ್ತಿಗೆ ಬೆಂಕಿ ಹಚ್ಚುತ್ತಿದ್ದಾರೆ. ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರ ಗುಂಡೇಟಿಗೆ ಒಬ್ಬ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ನೂರಕ್ಕೂ ಹೆಚ್ಚು ಯುವಕರು ಸೇರಿ 4 ವರ್ಷದ ಸೇನಾ ನೇಮಕಾತಿ ಯೋಜನೆಯನ್ನು ರದ್ದು ಮಾಡಿ, ದೀರ್ಘಕಾಲದ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರು.
ಈ ವೇಳೆ ಯುವಕರ ಗುಂಪು ರೈಲ್ವೇ ನಿಲ್ದಾಣದ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ 4 ರೈಲ್ವೇ ಕೋಚ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಒಂದು ರೈಲು ಸಂಪೂರ್ಣ ಸುಟ್ಟುಹೋಗಿದೆ ಎಂದು ರೈಲ್ವೇ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಪ್ರತಿಭಟನಾ ನಿರತರು, ಸಿಕಂದರಾಬಾದ್ನ ಪ್ಲಾಟ್ ಫ್ಲಾರ್ಮ್ ನಂ.1 ರಿಂದ 10 ರವರೆಗಿನ ಎಲ್ಲಾ ಸಿಸಿಟಿವಿ, ವಾಣಿಜ್ಯ ಅಂಗಡಿಗಳು, ಲೈಟ್ಸ್ ಹಾಗೂ ಫ್ಯಾನ್ಸ್ ಗಳನ್ನು ಮುರಿದು ಹಾಕಿ ಬೆಂಕಿ ಹಾಕಿದ್ದಾರೆ. ಪ್ರತಿಭಟನಾಕಾರರು ಎಲೆಕ್ಟ್ರಿಕ್ ಲೋಕೋಮೋಟಿವ್ ಇಂಜಿನ್ಗಳಿಗೆ ನುಗ್ಗಲು ಪ್ರಯತ್ನಿಸಿದ್ದು, ನಿಲ್ದಾಣದ ಅಧಿಕಾರಿಗಳು ವಿದ್ಯುತ್ ನಿತಯಂತ್ರಣವನ್ನು ತೆಗೆದು ಹಾಕಿದ್ದಾರೆ. ಅಜಂತ ಎಕ್ಸ್ಪ್ರೆಸ್, ಈಸ್ಟ್ ಕಾಸ್ಟ್ ಎಕ್ಸ್ಪ್ರೆಸ್ ಮತ್ತು ಎಮ್ಎಮ್ಟಿಎಸ್ ರೈಲುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.
ಪತ್ರಿಭಟನೆ ನಿಯಂತ್ರಿಸಲು ತೆಲಂಗಾಣದ ಪೊಲೀಸರು 10 ಸುತ್ತು ಗುಂಡು ಹಾರಿಸಿದ್ದಾರೆ. ಈ ಗುಂಡೇಟಿಗೆ ದಾಮೋದರ್ ಕುಮಾರ್ ಎಂಬ ಯುವಕ ಬಲಿಯಾಗಿದ್ದಾನೆ. ಇನ್ನೂ, 8 ಜನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಂದ್ರದ ರೈಲ್ವೆ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದು, ಸಿಕಂದರಾಬಾದ್ ವಿಮಾನ ನಿಲ್ದಾಣದಲ್ಲಿ ಅಂದಾಜು 20 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ.
ತೆಲಂಗಾಣ ಮತ್ತು ಹೈದ್ರಾಬಾದ್ನಾದ್ಯಂತ ರೈಲ್ವೇ ನಿಲ್ದಾಣಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ಇಂದು ಜೂನ್ 17 ರಂದು ಒಂದು ದಿನದ ಮಟ್ಟಿಗೆ ಹೈದ್ರಾಬಾದ್ ನ ಮೆಟ್ರೋ ಬಂದ್ ಮಾಡಲಾಗಿದೆ.