ಆದಿಪುರುಷ್ – ಎಲ್ಲಾ ಥೇಟರ್‌ಗಳಲ್ಲಿ ಹನುಮಂತನಿಗೆ ಒಂದು ಸೀಟ್ ರಿಸರ್ವ್.. ಟ್ರೋಲ್ ಏಕೆ?

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟಿಸಿರುವ ಆದಿಪುರುಷ್ ಸಿನಿಮಾ ಜೂನ್ 16ರಂದು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಸಿನಿಮಾ ಪ್ರಮೋಷನ್‌ಗೆ ಹೊಸ ದಾರಿ ತುಳಿದಿರುವ ಚಿತ್ರತಂಡ ಹೊಸ ಘೋಷಣೆ ಮಾಡಿದೆ. ಎಲ್ಲಾ ಥೇಟರ್‌ಗಳಲ್ಲಿ ಹನುಮಂತನಿಗೆ ಒಂದು ಸೀಟ್ ರಿಸರ್ವ್ ಮಾಡುವುದಾಗಿ ಘೋಷಿಸಿದೆ.

ರಾಮಾಯಣ ಪಾರಾಯಣ ನಡೆಯುವ ಪ್ರತಿಯೊಂದು ಕಡೆಯೂ ಹನುಮಂತ ಬರುತ್ತಾನೆ ಎಂಬುದು ನಂಬಿಕೆ. ಈ ನಂಬಿಕೆಯನ್ನು ಗೌರವಿಸುತ್ತಾ, ಪ್ರಭಾಸ್ ರಾಮನಾಗಿ ನಟಿಸಿದ ಆದಿಪುರುಷ್ ಸಿನಿಮಾದ ಪ್ರದರ್ಶಿಸುವ ಪ್ರತಿಯೊಂದು ಥೇಟರ್‌ನಲ್ಲಿ ಒಂದು ಸೀಟ್‌ನ ಟಿಕೆಟ್ ಮಾರಾಟ ಮಾಡದೇ ಹಾಗೆಯೇ ಉಳಿಸಿಕೊಂಡು, ಹನುಮಂತನಿಗಾಗಿ ಪ್ರತ್ಯೇಕವಾಗಿ ಮೀಸಲಿರಿಸಲಾಗುತ್ತದೆ.ರಾಮಭಕ್ತನಿಗೆ ಗೌರವ ಮರ್ಯಾದೆಗಳನ್ನು ಸಮರ್ಪಿಸುತ್ತಾ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಈ ಶ್ರೇಷ್ಠ ಕಾರ್ಯಕ್ಕೆ ಶ್ರೀಕಾರ ಹಾಡುತ್ತಿದ್ದೇವೆ.ಎಷ್ಟೋ ಪ್ರತಿಷ್ಠಾತ್ಮಕವಾಗಿ ಭಾರೀ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಿದ ಆದಿಪುರುಷ್ ಸಿನಿಮಾವನ್ನು ಹನುಮಂತನ ಸಮಕ್ಷಮದಲ್ಲಿ  ಎಲ್ಲರೂ ತಪ್ಪದೇ ನೋಡೋಣ
– ಆದಿಪುರುಷ್ ಚಿತ್ರತಂಡ

ಈ ಬಗ್ಗೆ ಪ್ರೀರಿಲೀಸ್ ಫಂಕ್ಷನ್‌ನಲ್ಲಿ ಹೇಳುತ್ತಾ ನಿರ್ದೇಶಕ ಓಂ ರೌತ್ ಭಾವುಕರಾಗಿದ್ದರು.

ಆದರೆ, ಹನುಮಾನ್‌ಗೆ ಒಂದು ಸೀಟು ಕಾಯ್ದಿರಿಸುವ ಆದಿಪುರುಷ್ ಚಿತ್ರತಂಡದ ನಡೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಆಗಿದೆ.

ಪುರಾಣಗಳ ಪ್ರಕಾರ ಹನುಮಾನ್ ಎಲ್ಲಾ ಕಡೆಯೂ ಇರುತ್ತಾನೆ ಅಂತಾರೆ. ಕಲಿಯುಗ ಅಂತ್ಯವಾದರೂ ಅವರು ಇರುತ್ತಾರೆ. ನೀವೇನೋ ಎಲ್ಲಾ ಥೇಟರ್‌ಗಳಲ್ಲಿ ನೀವು ಕಾಯ್ದಿರಿಸಿದ ಸೀಟಲ್ಲಿ ಕೂತ್ಕೊಂಡು ಸಿನಿಮಾ ನೋಡಬೇಕು ಅಂತಿದ್ದೀರಾ..ಕಟ್ ದ ಕ್ರಾಪ್

ಎಂದು ಚೈತು485 ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ಕತ್ಯುಷ ಎನ್ನುವವರು ಸ್ಪಂದಿಸಿ,

ಒಂದೇ ಸೀಟೇನಾ..? ರಾಮಸೀತೆಯರ ಕತೆಯೇನು? ಹನುಮನ ದೇವರನ್ನು ನಿರ್ಲಕ್ಷ್ಯ ಮಾಡುವುದೆಂದರೇ ಹನುಮನ ಭಕ್ತರನ್ನು ನಿರ್ಲಕ್ಷಿಸಿದಂತೆ ಅಲ್ವಾ.. ನನ್ನ ಭಾವನೆಗಳಿಗೆ ಧಕ್ಕೆ ತಂದಿದ್ದೀರಾ

ಎಂದು ಟ್ವೀಟಿಸಿದ್ದಾರೆ.

ಅಸಲಿಗೆ ಚಪ್ಪಲಿ ಹಾಕ್ಕೊಂಡು ಥೇಟರ್ ಒಳಗೆ ಬರಬಹುದಾ ಎಂದು ಮತ್ತೊಬ್ಬ ನೆಟ್‌ಜೆನ್ ಪ್ರಶ್ನಿಸಿದ್ದಾರೆ. ಇಂತಹ ಜಿಮ್ನಾಸ್ಟಿಕ್ ಪ್ರಮೋಷನ್ಸ್‌ನಿಂದ ನಿಮ್ಮನ್ನು ನೀವೆ ಏಕೆ ಅಪಹಾಸ್ಯ ಮಾಡಿಕೊಳ್ಳುತ್ತೀರಾ? ಮುಂದೆ ಮಹಾಭಾರತದಲ್ಲಿ ಅಶ್ವತ್ಥಾಮನಿಗೂ ಒಂದು ಸೀಟ್ ಕಾಯ್ದಿರಿಸಿ ಅಂತೀರಾ ಎಂದು ಏಸ್‌ಸ್ಪೇಡ್ ಹೆಸರಿನ ಖಾತೆದಾರರು ಕಾಮೆಂಟಿಸಿದ್ದಾರೆ.

ಇನ್ನೊಬ್ಬರಂತೂ, ಹನುಮನಿಗೆ ಆಧಾರ್ ಕಾರ್ಡ್ ಬೇಕಾಗುತ್ತೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಇದು ಅರ್ಥವಿಲ್ಲದ ನಿರ್ಣಯ ಎಂದು ಸುಜಿತ್ ಎನ್ನುವವರು ಕಾಮೆಂಟಿಸಿದ್ದಾರೆ.

ಇನ್ನೊಬ್ಬರು ಟಿಕೆಟ್‌ಗಳ ಹೆಸರಲ್ಲಿ ಬದಲಿಸಿ ಜೋಕ್ ಮಾಡಿದ್ದಾರೆ. ಬಾಲ್ಕನಿಯನ್ನು ಅಯೋಧ್ಯೆ ಎಂದು, ಲೋವರ್ ಬಾಲ್ಕನಿಯನ್ನು ರಾಮೇಶ್ವರಂ ಎಂದು.. ಹನುಮನ ಸೀಟ್ 1 ಎಂದು ಟ್ವೀಟಿಸಿದ್ದಾರೆ. ಟ್ರೋಲಿಂಗ್ ಮುಂದುವರೆದಿದೆ.