ಡ್ರಗ್ಸ್ ಸೇವನೆ ಆರೋಪದಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮಗ ಸಿದ್ದಾಂತ್ ಕಪೂರ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಎಂ.ಜಿ.ರಸ್ತೆ ಟ್ರಿನಿಟಿ ವೃತ್ತದ ಸಮೀಪ ಇರುವ ದಿ ಪಾರ್ಕ್ ಹೋಟೆಲ್ ನಲ್ಲಿ ಭಾನುವಾರ ರಾತ್ರಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಎಂದ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್ ಸೇವನೆ ಆರೋಪದ ಮೇಲೆ ಸಿದ್ದಾಂತ್ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಂಚತಾರಾ ಹೋಟೆಲ್ನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಭಾಗಿಯಾಗಿರುವವರಿಗೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಲಸೂರು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುಮಾರು 35 ಮಂದಿ ಮಹಿಳೆಯರು ಮತ್ತು ಪುರುಷರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ಮೇರೆಗೆ ಹೋಟೆಲ್ ಮೇಲೆ ದಾಳಿ ಮಾಡಲಾಗಿದೆ. 35 ಜನರು ಪಾರ್ಟಿಯಲ್ಲಿದ್ದರು. ಡ್ರಗ್ಸ್ ಸೇವಿಸಿದ ಶಂಕೆ ಮೇರೆಗೆ ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಟ ಸಿದ್ದಾಂತ್ ಕಪೂರ್ ಸೇರಿ ಐವರ ವೈದ್ಯಕೀಯ ವರದಿ ಬಂದಿದ್ದು, ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ. ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದರು.
ಡ್ರಗ್ಸ್ ಸೇವನೆ ಖಚಿತಪಟ್ಟ ಐದು ಜನರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಯಡಿ, 1985 (ಎನ್ಡಿಪಿಎಸ್) ಪ್ರಕರಣ ದಾಖಲಾಗಿದೆ. ಈ ಪಾರ್ಟಿಯಲ್ಲಿದ್ದ ಡಿಜೆ ಮುಂಬೈ ಮೂಲದವರು ಎನ್ನಲಾಗಿದೆ.