ವಿಕ್ರಾಂತ್ ರೋಣ ಬೆಡಗಿ ‘ಜಾಕ್ವೆಲಿನ್ ಫರ್ನಾಂಡಿಸ್​’ರ 7 ಕೋ. ರೂ ವಶ

Jacqueline Fernandez

ಸುಕೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.

ಸುಕೇಶ್ ಚಂದ್ರಶೇಖರ್ ಸುಲಿಗೆ ಮಾಡಿದ ಹಣವನ್ನು ಬಳಸಿಕೊಂಡು ಜಾಕ್ವೆಲಿನ್ ಫರ್ನಾಂಡೀಸ್‌ಗೆ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಯನ್ನು ನೀಡಿದ ಪುರಾವೆಗಳು ಅಧಿಕಾರಿಗಳಿಗೆ ಸಿಕ್ಕಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಉಡುಗೊರೆಗಳ ಹೊರತಾಗಿ, ಆತ ಜಾಕ್ವೆಲಿನ್ ಕುಟುಂಬ ಸದಸ್ಯರಿಗೆ 1,73,000 ಅಮೆರಿಕನ್‌ ಡಾಲರ್‌ಗಳು ಮತ್ತು ಸುಮಾರು 27,000 ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡಿದ್ದಾನೆ.

ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಪರ್ಕಕ್ಕಾಗಿ ಇಡಿ ಹಲವು ಬಾರಿ ಪ್ರಶ್ನಿಸಿತ್ತು. ಜಾಕ್ವೆಲಿನ್ ಸದ್ಯಕ್ಕೆ ಆರೋಪಿಯಲ್ಲ, ಆದರೆ ತನಿಖಾಧಿಕಾರಿಗಳು ಇನ್ನೂ ಆಕೆಗೆ ಕ್ಲೀನ್ ಚಿಟ್ ನೀಡಿಲ್ಲ. ಶ್ರೀಲಂಕಾ ಮೂಲದ ನಟಿಗೆ ದೇಶ ತೊರೆಯದಂತೆ ನಿಷೇಧ ಹೇರಲಾಗಿದೆ.

ಸ್ಪೂಫ್ ಕರೆಗಳ ಮೂಲಕ ಸುಕೇಶ್ ಚಂದ್ರಶೇಖರ್ ದೆಹಲಿಯ ಉದ್ಯಮಿಯೊಬ್ಬರ ಪತ್ನಿಯಿಂದ 215 ಕೋಟಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸುಕೇಶ್ ದೆಹಲಿಯ ಜೈಲಿನಲ್ಲಿದ್ದಾಗ, ಪ್ರಧಾನಿ ಕಚೇರಿ, ಕಾನೂನು ಸಚಿವಾಲಯ ಮತ್ತು ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ ಸಂತ್ರಸ್ತ ಮಹಿಳೆಯಿಂದ ಹಣ ವಸೂಲಿ ಮಾಡಿದ್ದಾನೆ. ಸಂತ್ರಸ್ತೆಯ ಪತಿಗೆ ಜಾಮೀನು ದೊರಕಿಸಿಕೊಡುವುದಾಗಿ ಮತ್ತು ಔಷಧ ವ್ಯಾಪಾರವನ್ನು ನಡೆಸುವುದಾಗಿ ಸುಕೇಶ್ ದೂರವಾಣಿ ಕರೆಗಳಲ್ಲಿ ಹೇಳಿಕೊಂಡಿದ್ದ.

ರಾಜಕಾರಣಿ ಟಿಟಿವಿ ದಿನಕರನ್ ಒಳಗೊಂಡ ಐದು ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಸುಕೇಶ್ ಕೂಡ ಭಾಗಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಇಡಿ ಅವರನ್ನು ಬಂಧಿಸಿತ್ತು.

LEAVE A REPLY

Please enter your comment!
Please enter your name here