ಪೀಣ್ಯ ಮೇಲ್ಸೇತುವೆ ಬಳಿ ಭಿಕರ ಅಪಘಾತ ನಡೆದು ದಂಪತಿಗಳಿಬ್ಬರು ಸಾವನ್ನಪ್ಪಿರುವ ಪ್ರಕರಣ ವರದಿಯಾಗಿದೆ.
ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದ್ದು, ಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಚಲಿಸುತ್ತಿದ್ದ ದಂಪತಿ ಮೃತಪಟ್ಟಿದ್ದಾರೆ. ಮೃತರನ್ನು ಬೆಂಗಳೂರಿನ ದಾಸನಪುರದ ಸಿದ್ದನಹೊಸಹಳ್ಳಿ ನಿವಾಸಿ ರುದ್ರೇಶ್(36 ವರ್ಷ) ಮತ್ತು ಅವರ ಪತ್ನಿ ಸುನೀತಾ(30 ವರ್ಷ) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ರುದ್ರೇಶ್ ಗಾರೆ ಕಾರ್ಮಿಕರಾಗಿದ್ದು, ಸುನೀತಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಹೋಗುವಾಗ ದಾಸರಹಳ್ಳಿ ಮೇಲು ಸೇತುವೆ ಮೇಲೆ ಅತೀ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ದಂಪತಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಇಬ್ಬರು ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಆರೋಪಿ ವಾಹನ ಸಮೇತ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.